ವಾರಾಣಸಿ: ದೇಶದ ಪ್ರಮುಖ ತೀರ್ಥಕ್ಷೇತ್ರಗಳಲ್ಲಿ ಒಂದಾದ ವಾರಾಣಸಿಯಲ್ಲಿ ಅಂತರರಾಷ್ಟ್ರೀಯ ದರ್ಜೆಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗಲಿದೆ.
ಕ್ರೀಡಾಂಗಣ ನಿರ್ಮಿಸಲು ಭೂಸ್ವಾಧೀನಕ್ಕಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರವು ₹ 121 ಕೋಟಿ ಖರ್ಚು ಮಾಡಿದೆ.
ಕಾಶಿಯೆಂದೂ ಕರೆಯಲಾಗುವ ವಾರಾಣಸಿಯ ಸ್ನಾನ ಘಟ್ಟಗಳ ಮೆಟ್ಟಿಲುಗಳ ಮಾದರಿಯಲ್ಲಿ ಪ್ರೇಕ್ಷಕರ ಗ್ಯಾಲರಿಯು ನಿರ್ಮಾಣವಾಗಲಿದೆ. 30 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ಗ್ಯಾಲರಿ ಇದಾಗಲಿದೆ. ರಾಜಾತಾಲಾಬ್ ಪ್ರದೇಶದ ರಿಂಗ್ ರಸ್ತೆಯ ಸಮೀಪ ಈ ಕ್ರೀಡಾಂಗಣ ತಲೆ ಎತ್ತುತ್ತಿದೆ.
ಶನಿವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸುವರು. ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಸುನಿಲ್ ಗಾವಸ್ಕರ್ ಮತ್ತು ರವಿಶಾಸ್ತ್ರಿ, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ರಾಜೀವ ಶುಕ್ಲಾ ಮತ್ತು ಕಾರ್ಯದರ್ಶಿ ಜಯ್ ಶಾ ಹಾಜರಾಗಲಿದ್ದಾರೆ.
ಉತ್ತರ ಪ್ರದೇಶದಲ್ಲಿ ಕಾನ್ಪುರ ಹಾಗೂ ಲಖನೌನಲ್ಲಿ ಅಂತರರಾಷ್ಟ್ರೀಯ ಕ್ರೀಡಾಂಗಣಗಳಿವೆ.