ಕಾಸರಗೋಡು: ಉಪ್ಪಳದ ಹಿದಾಯತ್‍ನಗರದಲ್ಲಿ ಗಸ್ತಿನಲ್ಲಿದ್ದ ಮಂಜೇಶ್ವರ ಠಾಣೆ ಎಸ್.ಐ ನೇತೃತ್ವದ ಪೊಲೀಸರ ತಂಡವನ್ನು ಥಳಿಸಿ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಮುಸ್ಲಿಂಲೀಗ್ ಮುಖಂಡ, ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ಗೋಲ್ಡನ್ ಅಬ್ದುಲ್ ರಹಮಾನ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಸೆ. 11ಕ್ಕೆ ಮುಂದೂಡಿದೆ.
ಪ್ರಕರಣದಲ್ಲಿ ನಾಲ್ಕು ಮಂದಿ ಆರೋಪಿಗಳ ಬಂಧನ ಬಾಕಿಯಿದ್ದು, ಈ ಮಧ್ಯೆ ಆರೋಪಿಗೆ ಜಾಮೀನು ಮಂಜೂರುಗೊಳಿಸಿದಲ್ಲಿ ಇತರ ಆರೋಪಿಗಳ ಬಂಧನಕ್ಕೆ ಅಡ್ಡಿಯಾಗಲಿರುವುದಾಘಿ ಪ್ರೋಸಿಕ್ಯೂಶನ್ ತಿಳಿಸಿದ ಹಿನ್ನೆಲೆಯಲ್ಲಿ ಜಾಮೀನು ಮುಂದೂಡಲಾಗಿದೆ. ಒಬ್ಬ ಆರೋಪಿ ವಿದೇಶಕ್ಕೆ ಪರಾರಿಯಾಗಿರುವುದಾಘಿ ಮಾಹಿತಿಯಿದ್ದು, ಈತನ ಪತ್ತೆಗೆ ಇಂಟರ್‍ಪೋಲ್ ನೆರವು ಯಾಚಿಸಲಾಗಿದೆ. ಕಾಲಿಯಾರಫೀಕ್ ಕೊಲೆ ಪ್ರಕರಣದ ಆರೋಪಿ ನೂರಾಲಿ ಕೃತ್ಯದಲ್ಲಿ ಶಾಮೀಲಾಗಿದ್ದು, ಈತನ ಸಹಿತ ಇಬ್ಬರು ಮುಂಬೈಗೆ ಪರಾರಿಯಾಗಿರುವ ಹಿನ್ನೆಲೆಯಲ್ಲಿ ಇವರ ಪತ್ತೆಗಾಗಿ ಪೊಲೀಸರು ಮುಂಬೈ ತೆರಳಲು ಸಿದ್ಧತೆ ನಡೆಸಿದ್ದಾರೆ.
ಭಾನುವಾರ ಮಧ್ಯರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರು ಹಿದಾಯತ್‍ನಗರದ ಅಂಗಡಿ ಎದುರು ಜನರು ಗುಂಪುಸೇರಿರುವುದನ್ನು ಪ್ರಶ್ನಿಸಲು ಜೀಪು ನಿಲ್ಲಿಸಿ ಸನಿಹ ತೆರಳುತ್ತಿದ್ದಂತೆ ತಂಡದಲ್ಲಿದ್ದ ಕೆಲವರು ಸುತ್ತುವರಿದು ಹಲ್ಲೆ ನಡೆಸಿದ್ದಾರೆ. ಇದರಿಂದ ಎಸ್.ಐ ಅನೂಪ್ ಅವರ ಬಲದ ಕೈಗೆ ಗಂಭೀರ ಏಟು ಬಿದ್ದಿದ್ದು, ಇವರನ್ನು ಸನಿಹದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೀನಿಯರ್ ಪೊಲೀಸ್ ಅಧಿಕಾರಿ ಕಿಶೋರ್ ಅವರಿಗೂ ಗಾಯಗಳುಂಟಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಐವರ ವಿರುದ್ಧ ಜಾಮೀನುರಹಿತ ಕೇಸು ದಾಖಲಿಸಿಕೊಂಡಿದ್ದರು.