ಉಪ್ಪಳ: ಕ್ರೈಸ್ತ ಬಾಂಧವರು ಶುಕ್ರವಾರ ಮೊಂತಿ ಫೆಸ್ತ್ ( ತೆನೆ ಹಬ್ಬ) ವನ್ನು ಆಚರಿಸಿದರು. ಕಯ್ಯಾರ್ ಕ್ರಿಸ್ತ ರಾಜ ದೇವಾಲಯದಲ್ಲಿ ನಡೆದ ವಿಧಿ ವಿಧಾನ ಹಾಗೂ ಬಲಿಪೂಜೆಯನ್ನು ಧರ್ಮಗುರು ಫಾದರ್ ವಿಶಾಲ್ ಮೋನಿಸ್ ನೆರವೇರಿಸಿದರು.
ಹಬ್ಬಕ್ಕೆ ಪೂರ್ವಭಾವಿಯಾಗಿ ಚರ್ಚ್‍ಗಳಲ್ಲಿ 9 ದಿನಗಳ ನೊವೇನಾ ಪ್ರಾರ್ಥನೆಯ ಕಾರ್ಯಕ್ರಮ ಆ. 30 ರಿಂದ ನಡೆದಿತ್ತು. ನೊವೇನಾ ಪ್ರಾರ್ಥನೆಯ ವೇಳೆ ಪ್ರತಿ ದಿನ ಮಕ್ಕಳು ಹಾಗೂ ಹಿರಿಯರು ಹೂವುಗಳನ್ನು ಕೊಯ್ದು ಮೇರಿ ಮಾತೆಗೆ (ಬಾಲೆ ಮೇರಿಯ ಮೂರ್ತಿಗೆ) ಸಮರ್ಪಿಸಿದ್ದರು.
ಚರ್ಚ್‍ಗಳಲ್ಲಿ ಬಲಿ ಪೂಜೆ, ಹೊಸ ತೆನೆಯ ಆಶೀರ್ವಚನ ಮತ್ತು ವಿತರಣೆ, ಧರ್ಮ ಗುರುಗಳಿಂದ ಹಬ್ಬದ ಸಂದೇಶ, ಕ್ರೈಸ್ತರಿಂದ ಹಬ್ಬದ ಶುಭಾಶಯ ವಿನಿಮಯ, ಸಿಹಿ ತಿಂಡಿ ಮತ್ತು ಕಬ್ಬು ವಿತರಣೆ ಹಾಗೂ ಬಳಿಕ ಮನೆಗಳಲ್ಲಿ ಕೌಟುಂಬಿಕವಾಗಿ ಹಬ್ಬದ ಭೋಜನ ಕಾರ್ಯಕ್ರಮ ವಿಶೇಷತೆಯಾಗಿದೆ.