ಕಾಸರಗೋಡು: ಸಮಾಜದ ಕಟ್ಟಕಡೆಯ ಮಹಿಳೆಯರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಮಹಿಳಾ ಆಯೋಗ ಕಾಸರಗೋಡು ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಸಾರ್ವಜನಿಕ ವಿಚಾರಣೆ ನಡೆಸಲಿರುವುದಾಗಿ ಮಹಿಳಾ ಆಯೋಗದ ಸದಸ್ಯೆ ವಕೀಲೆ, ಕುಞËಯಿಷಾ ತಿಳಿಸಿದ್ದಾರೆ. ಅವರು ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಅದಾಲತ್‍ನಲ್ಲಿ ಮಾತನಾಡಿದರು.
ವಿಧವೆಯರು, ವಿಚ್ಛೇದಿತ ಮಹಿಳೆಯರು, ಏಕಾಂಗಿ ಮಹಿಳೆ, ನಾಪತ್ತೆಯಾಗಿರುವ ಗಂಡಂದಿರ ಮಹಿಳೆಯರು ಮತ್ತು ಇತರ ವಿಷಯಗಳಿಗೆ ಸಂಬಂಧಿಸಿ ಒಂಟಿಯಾಗಿರುವ ಮಹಿಳೆಯರಿಗೂ ದೂರು ಸಲ್ಲಿಸಬಹುದಾಗಿದೆ. ಆಯೋಗವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಸಮಸ್ಯೆಗಳ ಕುರಿತು ಸಾರ್ವಜನಿಕ ವಿಚಾರಣೆಗಳನ್ನು ನಡೆಸುತ್ತಿದ್ದು, ವಿಚಾರಣೆಯಲ್ಲಿ ಸ್ವೀಕರಿಸಿದ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಕ್ರೋಢೀಕರಿಸಿ ರಾಜ್ಯ ಸರ್ಕಾರಕ್ಕೆ ರವಾನಿಸಲಾಗುತ್ತದೆ. ಸ್ಥಳೀಯಾಡಳಿತ ಸಂಸ್ಥೆಗಳು, ಮಹಿಳಾ ಸಂಘಟನೆಗಳು ಮತ್ತು ಕುಟುಂಬಶ್ರೀ ಮೂಲಕ ಸಾರ್ವಜನಿಕ ವಿಚಾರಣೆಯ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅದಾಲತ್‍ನಲ್ಲಿ 17 ದೂರುಗಳನ್ನು ಪರಿಗಣಿಸಲಾಗಿದೆ. ಈ ಪೈಕಿ ಮೂರು ದೂರುಗಳಿಗೆ ಪರಿಹಾರ ಕಲ್ಪಿಸಲಾಗಿದೆ. ಉಳಿದ 14 ದೂರುಗಳನ್ನು ಮುಂದಿನ ಸಭೆಗೆ ಮುಂದೂಡಲಾಯಿತು. ಹೆಚ್ಚಿನ ದೂರುಗಳು ಕೌಟುಂಬಿಕ ದೌರ್ಜನ್ಯ, ಗಡಿ ವಿವಾದ ಮತ್ತು ಆಸ್ತಿ ವಿವಾದಗಳಿಗೆ ಸಂಬಂಧಿಸಿದ್ದಾಗಿದ್ದು, ಕಾಸರಗೋಡಿನಲ್ಲಿ ಇತರ ಜಿಲೆಲಗಳಿಗಿಂತ ಕಡಿಮೆ ದೂರು ದಾಖಲಾಗಿರುವುದಾಗಿ ತಿಳಿಸಿದರು. ಮಹಿಳಾ ಆಯೋಗದ ಸದಸ್ಯೆ ಎಂ. ಇಂದಿರಾವತಿ, ಮಹಿಳಾ ಠಾಣೆ ಸಹಾಯಕ ಸಬ್ ಇನ್ಸ್ ಪೆಕ್ಟರ್ ಸುಪ್ರಿಯಾ ಜೇಕಬ್, ಸಿಪಿಒ ಕೆ. ಗ್ರೀಷ್ಮಾ, ಮಹಿಳಾ ಕೋಶದ ಅಧಿಕಾರಿಗಳಾದ ಬೈಜು ಶ್ರೀಧರನ್, ವಿ. ಶ್ರೀಜಿತ್ ಉಪಸ್ಥಿತರಿದ್ದರು.