ಜಕಾರ್ತ: ಜಾಗತಿಕ ಬೆಳವಣಿಗೆಯಲ್ಲಿ ಆಸಿಯಾನ್ ರಾಷ್ಟ್ರಗಳ ಪಾತ್ರ ಮಹತ್ವದ್ದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂಡೋನೇಷ್ಯಾದ ಜಕಾರ್ತದಲ್ಲಿ ಗುರುವಾರ ಆಸಿಯಾನ್- ಭಾರತ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಆಸಿಯಾನ್ ವಿಷಯಗಳು: ಬೆಳವಣಿಗೆಯ ಕೇಂದ್ರಬಿಂದು ಈ ವರ್ಷದ ಥೀಮ್ ಆಗಿದೆ. ಜಾಗತಿಕವಾಗಿ ಪ್ರಮುಖ ಪಾತ್ರ ವಹಿಸುವುದರಿಂದ ಆಸಿಯಾನ್ ವಿಷಯಗಳು ಇಲ್ಲಿ ಪ್ರಮುಖವಾಗಿವೆ. ಇಲ್ಲಿ ಪ್ರತಿಯೊಬ್ಬರ ಧ್ವನಿ ಕೇಳುತ್ತದೆ ಮತ್ತು ಬೆಳವಣಿಗೆಯ ಕೇಂದ್ರಬಿಂದುವಾಗಿದೆ ಎಂದರು.
ನಮ್ಮ ಇತಿಹಾಸ ಮತ್ತು ಭೌಗೋಳಿಕತೆಯು ಭಾರತ ಮತ್ತು ಆಸಿಯಾನ್ ರಾಷ್ಟ್ರಗಳನ್ನು ಒಂದುಗೂಡಿಸುತ್ತದೆ. ಅದರೊಂದಿಗೆ, ನಮ್ಮ ಮೌಲ್ಯಗಳು, ಪ್ರಾದೇಶಿಕ ಏಕೀಕರಣ ಮತ್ತು ಶಾಂತಿ, ಸಮೃದ್ಧಿ ಮತ್ತು ಬಹುಧ್ರುವ ಪ್ರಪಂಚ ಕೂಡಾ ನಮ್ಮನ್ನು ಒಗ್ಗೂಡಿಸುತ್ತದೆ. ಆಸಿಯಾನ್ ಭಾರತದ ಪೂರ್ವ ನೀತಿಯ ಕೇಂದ್ರ ಸ್ತಂಭವಾಗಿದೆ. ಆಸಿಯಾನ್-ಭಾರತ ಕೇಂದ್ರೀಯತೆ ಮತ್ತು ಇಂಡೋ-ಪೆಸಿಫಿಕ್ ಕುರಿತು ಆಸಿಯಾನ್ ದೃಷ್ಟಿಕೋನವನ್ನು ಭಾರತ ಬೆಂಬಲಿಸಲಿದೆ. ಭಾರತ- ಆಸಿಯಾನ್ ಉತ್ತಮ ಸ್ನೇಹಿತರು, ಆಸಿಯಾನ್ ರಾಷ್ಟ್ರಗಳ ಅಭಿವೃದ್ಧಿಗೆ ಭಾರತ ಸಹಕಾರ ನೀಡಲಿದೆ. ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನೆರವು ನೀಡಲಾವುದು ಎಂದು ಅವರು ತಿಳಿಸಿದರು.
ಕೋವಿಡ್ ನಂತರದ ನಿಯಮಾಧಾರಿತ ವಿಶ್ವ ಕ್ರಮವನ್ನು ನಿರ್ಮಿಸಲು ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಉಚಿತ ಮತ್ತು ಮುಕ್ತ ಇಂಡೋ-ಪೆಸಿಫಿಕ್‌ನ ಪ್ರಗತಿ ಮತ್ತು ಜಾಗತಿಕ ದಕ್ಷಿಣದ ಧ್ವನಿಯನ್ನು ಹೆಚ್ಚಿಸುವುದು ಎಲ್ಲರ ಸಾಮಾನ್ಯ ಹಿತಾಸಕ್ತಿಯಾಗಿದೆ ಎಂದು ಹೇಳಿದರು.
"ಕಳೆದ ವರ್ಷ ನಾವು ಭಾರತ-ಆಸಿಯಾನ್ ಸ್ನೇಹ ದಿನವನ್ನು ಆಚರಿಸಿದ್ದೇವೆ ಮತ್ತು ಅದಕ್ಕೆ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯ ರೂಪ ನೀಡಿದ್ದೇವು. ನಮ್ಮ ಪಾಲುದಾರಿಕೆ ನಾಲ್ಕನೇ ದಶಕವನ್ನು ತಲುಪಿದೆ. ಈ ಶೃಂಗಸಭೆಯ ಸಹ-ಅಧ್ಯಕ್ಷರಾಗಿರುವುದು ನನಗೆ ಗೌರವವಾಗಿದೆ. ಈ ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೋಡೊ ಅವರನ್ನು ಅಭಿನಂದಿಸುವುದಾಗಿ ಮೋದಿ ಹೇಳಿದರು.
ಇದಕ್ಕೂ ಮುನ್ನಾ ಜಕಾರ್ತದಲ್ಲಿರುವ ಅನಿವಾಸಿ ಭಾರತೀಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದ್ದೂರಿಯಾಗಿ ಸ್ವಾಗತ ನೀಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು.