ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ತೀನ್ ಮೂರ್ತಿ ಭವನ ಆವರಣದಲ್ಲಿರುವ 'ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆ'ಯನ್ನು (ಎನ್‌ಎಂಎಂಎಲ್) 'ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆ' ಎಂದು ಅಧಿಕೃತವಾಗಿ ಮರುನಾಮಕರಣ ಮಾಡಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅನುಮೋದನೆ ನೀಡಿದ್ದಾರೆ.
ಈ ಕುರಿತು ರಾಷ್ಟ್ರಪತಿ ಭವನ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ ಎಂದು ಸುದ್ದಿಸಂಸ್ಥೆ ಎಎನ್‌ಐ 'ಎಕ್ಸ್'ನಲ್ಲಿ ತಿಳಿಸಿದೆ.
ದೆಹಲಿಯ ತೀನ್ ಮೂರ್ತಿ ಭವನ ಆವರಣದಲ್ಲಿರುವ 'ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆ' (ಎನ್‌ಎಂಎಂಎಲ್) ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದ್ದು 'ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆ' ಎಂಬುದಾಗಿ ಅಧಿಕೃತವಾಗಿ ಮರುನಾಮಕರಣಗೊಂಡಿದೆ.
ಆ.14ರಿಂದ ಅಧಿಕೃತವಾಗಿ ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆ'ಯು (ಎನ್‌ಎಂಎಂಎಲ್), 'ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆ' (ಪಿಎಂಎಂಎಲ್) ಆಗಿ ಬದಲಾಗಿದೆ. ಪ್ರಜಾಪ್ರಭುತ್ವೀಕರಣ ಮತ್ತು ವೈವಿಧ್ಯೀಕರಣಕ್ಕೆ ಅನುಗುಣವಾಗಿ ಹೆಸರನ್ನು ಬದಲಾಯಿಸಲಾಗಿದೆ ಎಂದು ಪಿಎಂಎಂಎಲ್ ಉಪಾಧ್ಯಕ್ಷ ಎ. ಸೂರ್ಯ ಪ್ರಕಾಶ್ ತಿಳಿಸಿದ್ದರು.
ಎನ್‌ಎಂಎಂಎಲ್‌ನ ಉಪಾಧ್ಯಕ್ಷರೂ ಆಗಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್ ಅಧ್ಯಕ್ಷತೆಯಲ್ಲಿ ಜೂನ್ 17ರಂದು ನಡೆದ ವಿಶೇಷ ಸಭೆಯಲ್ಲಿ ಸಂಸ್ಥೆಯ ಹೆಸರನ್ನು ಬದಲಾಯಿಸುವ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು.
ತೀನ್ ಮೂರ್ತಿ ಭವನ
ಬ್ರಿಟಿಷರ ಆಳ್ವಿಕೆ ವೇಳೆ ನಿರ್ಮಿಸಲಾಗಿರುವ ತೀನ್ ಮೂರ್ತಿ ಭವನ, ದೇಶ ಸ್ವಾತಂತ್ರ್ಯ ಪಡೆದ ನಂತರ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಅಧಿಕೃತ ನಿವಾಸವಾಗಿತ್ತು. ನೆಹರೂ ಅವರು ಈ ನಿವಾಸದಲ್ಲಿ 16 ವರ್ಷಗಳಿಗೂ ಹೆಚ್ಚು ಕಾಲ ವಾಸವಾಗಿದ್ದರು. ನೆಹರೂ ಅವರ 75ನೇ ಜನ್ಮದಿನದ ನೆನಪಿಗಾಗಿ 1964ರಲ್ಲಿ ಈ ಭವನದಲ್ಲಿ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಸ್ಥಾಪಿಸಿ, ಸಮರ್ಪಿಸಲಾಯಿತು. ನಂತರ ಇದಕ್ಕೆ ಸ್ವಾಯತ್ತ ಸ್ಥಾನಮಾನ ನೀಡಲಾಯಿತು. ಇದರ ಅಂಗವಾಗಿ 1966ರ ಏಪ್ರಿಲ್ 1ರಂದು ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆಯನ್ನು ಸ್ಥಾಪಿಸಲಾಯಿತು.