ಕೋಲ್ಕತ್ತ: 'ರಾಜಭವನದ ಆವರಣದಲ್ಲಿ ತಮ್ಮಿಚ್ಛೆಯಂತೆ ಯಾವುದೇ ರೀತಿ ಪ್ರತಿಭಟಿಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಆಹ್ವಾನಿಸುತ್ತೇನೆ. ಅವರು ನನ್ನ ಗೌರವಾನ್ವಿತ ಅತಿಥಿ' ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಹೇಳಿದ್ದಾರೆ.
ಕೋಲ್ಕತ್ತ: 'ರಾಜಭವನದ ಆವರಣದಲ್ಲಿ ತಮ್ಮಿಚ್ಛೆಯಂತೆ ಯಾವುದೇ ರೀತಿ ಪ್ರತಿಭಟಿಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಆಹ್ವಾನಿಸುತ್ತೇನೆ. ಅವರು ನನ್ನ ಗೌರವಾನ್ವಿತ ಅತಿಥಿ' ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಹೇಳಿದ್ದಾರೆ.
'ರಾಜ್ಯ ವಿಧಾನಸಭೆಯು ಅಂಗೀಕರಿಸಿರುವ ಮಸೂದೆಗಳಿಗೆ ಅನುಮೋದನೆ ನೀಡದೇ 'ತಡೆಹಿಡಿದಿರುವ' ಕ್ರಮವನ್ನು ಪ್ರತಿಭಟಿಸಿ ರಾಜಭವನದ ಹೊರಗೆ ಧರಣಿ ನಡೆಸುತ್ತೇನೆ' ಎಂದು ಮಮತಾ ಈಚೆಗೆ ಎಚ್ಚರಿಸಿದ್ದರು. ಅದಕ್ಕೆ ಪ್ರತಿಯಾಗಿ ರಾಜ್ಯಪಾಲರು ಈ ಮಾತು ಹೇಳಿದ್ದಾರೆ.
'ಅವರು ನನ್ನ ಘನ ಸಾಂವಿಧಾನಿಕ ಸಹೋದ್ಯೋಗಿ, ಗೌರವಾನ್ವಿತ ಮುಖ್ಯಮಂತ್ರಿ. ಅವರು ಬಯಸಿದರೆ ರಾಜಭವನದ ಆವರಣದೊಳಗೆ ಧರಣಿ ನಡೆಸಲು ಆಹ್ವಾನಿಸುತ್ತೇನೆ. ಅವರು ಏಕೆ ರಾಜಭವನದ ಹೊರಗೆ ಧರಣಿ ನಡೆಸಬೇಕು?' ಎಂದೂ ರಾಜ್ಯಪಾಲರು ಪ್ರಶ್ನಿಸಿದರು.
ವಿಶ್ವವಿದ್ಯಾಲಯಗಳ ಕುಲಾಧಿಪತಿಯೂ ಆಗಿರುವ ರಾಜ್ಯಪಾಲರು ತಮ್ಮ ಅಧಿಕಾರವನ್ನು ಬಳಸಿ ಪ್ರತಿಷ್ಠಿತ ಪ್ರೆಸಿಡೆನ್ಸಿ ಯೂನಿವರ್ಸಿಟಿ ಸೇರಿದಂತೆ ಪಶ್ಚಿಮ ಬಂಗಾಳದ 8 ವಿಶ್ವವಿದ್ಯಾಲಯಗಳಿಗೆ ಹಂಗಾಮಿ ಕುಲಪತಿಗಳನ್ನು ನೇಮಿಸಿದ್ದರು. ಈ ಬೆಳವಣಿಗೆಯನ್ನು ಮುಖ್ಯಮಂತ್ರಿ ಕಟುವಾಗಿ ಟೀಕಿಸಿದ್ದು, 'ಇದು, ರಾಜ್ಯ ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಯತ್ನ' ಎಂದು ತರಾಟೆಗೆ ತೆಗೆದುಕೊಂಡಿದ್ದರು.
ಮೂಲಗಳ ಪ್ರಕಾರ, ಇನ್ನೂ ಎಂಟು ವಿಶ್ವವಿದ್ಯಾಲಯಗಳಿಗೆ ಹಂಗಾಮಿ ಕುಲಪತಿಗಳನ್ನು ನೇಮಿಸುವ ಪ್ರಕ್ರಿಯೆ ಅಂತಿಮಗೊಂಡಿದ್ದು, ನೇಮಕಾತಿ ಆದೇಶಗಳನ್ನು ಶೀಘ್ರದಲ್ಲಿಯೇ ನೀಡಲಾಗುತ್ತದೆ.
ಐವರ ಸದಸ್ಯರ ಶೋಧನಾ ಸಮಿತಿ ಶಿಫಾರಸು ಮಾಡಿರುವ ಹೆಸರುಗಳಲ್ಲಿ ಒಬ್ಬರನ್ನು ಕುಲಪತಿ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂಬ ಕ್ರಮವನ್ನು ಉಲ್ಲೇಖಿಸಿದ್ದ ಮುಖ್ಯಮಂತ್ರಿ, ರಾಜ್ಯಪಾಲರು ಈಗ ಸಲಹೆಗಳಿಲ್ಲದೇ ತಮಗಿಷ್ಟದವರನ್ನು ನೇಮಕ ಮಾಡುತ್ತಿದ್ದಾರೆ ಎಂದಿದ್ದರು.