ಕಾಸರಗೋಡು: ಕೋಯಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ದೃಢಪಟ್ಟಿದ್ದು, ಕಾಸರಗೋಡು ಜಿಲ್ಲೆಯಲ್ಲೂ ವಿಶೇಷ ನಿಗಾ ವಹಿಸಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆಯ ಕಾರ್ಯಕ್ರಮಾಧಿಕಾರಿಗಳ ತುರ್ತು ಸಭೆಯನ್ನು ಆಯೋಜಿಸಲಾಗಿದ್ದು, ನಿಫಾ ಬಗ್ಗೆ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಜಿಲ್ಲಾಡಳಿತಕ್ಕೆ ತಿಳಿಸಲಾಗಿದೆ. ಸಾಂಕ್ರಾಮಿಕ ರೋಗಗಳ ಬಗ್ಗೆ ಕಾರ್ಯಾಚರಣೆ ಮತ್ತಷ್ಟು ಬಲಪಡಿಸಲು ಎಲ್ಲಾ ಆರೋಗ್ಯ ಕೇಂದ್ರಗಳಿಗೆ ನಿರ್ದೇಶನ ನೀಡಲಾಗಿದೆ. ಜನರು ಭಯಭೀತರಾಗದೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ.
ತೀವ್ರ ತಲೆನೋವು, ಆಯಾಸ, ವಾಂತಿ, ಶರೀರದಲ್ಲಿ ನಡುಕ ಮತ್ತು ಜ್ವರದ ಜತೆಗೆ ದೃಷ್ಟಿ ಮಂಕಾಗುವುದು ನಿಫಾ ರೋಗ ಲಕ್ಷಣಗಳಾಗಿದೆ. ಇಂತಹ ಲಕ್ಷಣಗಳು ಕಂಡುಬಂದಲ್ಲಿ, ತಕ್ಷಣ ಸನಿಹದ ಆರೋಗ್ಯ ಕೇಂದ್ರಗಳಿಗೆ ತೆರಳಿ ಚಿಕಿತ್ಸೆ ಪಡೆಯಬೇಕು. ರೋಗ ಶರೀರದ ದ್ರವದೊಂದಿಗೆ ಹರಡುತ್ತಿದ್ದು, ಕೆಮ್ಮುವಿಕೆ ಮತ್ತು ಸೀನುವಿಕೆಯಿಂದ ಇತರರಿಗೆ ಹರಡುವುದನ್ನು ತಡೆಯಲು ಮಾಸ್ಕ್ ಬಳಸಬೇಕು. ಅಂತಹ ರೋಗಿಗಳನ್ನು ನೋಡಿಕೊಳ್ಳುವವರು ಮತ್ತು ಅವರೊಂದಿಗೆ ನಿಕಟ ಸಂಪರ್ಕದಲ್ಲಿರುವವರು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಸಾಬೂನು ಅಥವಾ ಸ್ಯಾನಿಟೈಸರ್‍ನಿಂದ ಆಗಾಗ್ಗೆ ಕೈಗಳನ್ನು ತೊಳೆಯಬೇಕು. ರೋಗ ಹರಡುವುದನ್ನು ತಪ್ಪಿಸಲು ಸೋಂಕಿನ ಅಪಾಯವಿರುವ ಪ್ರದೇಶಗಳಿಗೆ ಪ್ರಯಾಣಿಸದಂತೆ ಎಚ್ಚರಿಕೆ ವಹಿಸಬೇಕು.
ಹಣ್ಣುಗಳನ್ನು ಚೆನ್ನಾಗಿ ತೊಳೆದ ನಂತರವೇ ಸೇವಿಸಬೇಕು. ಪಕ್ಷಿ, ಪ್ರಾಣಿಗಳು ಕಚ್ಚಿದ ಸಥಿತಿಯಲ್ಲಿರುವ ಹಣ್ಣುಗಳನ್ನು ಸೇವಿಸದಿರುವಂತೆಯೂ ಸಊಚಿಸಲಾಗಿದೆ. ತೆರೆದ ಪಾತ್ರೆಗಳಲ್ಲಿ ಸಂಗ್ರಹಿಸಿದ ಪಾನೀಯ, ಇತರ ಆಹಾರ ಸೇವನೆ ಬೇಡ. ಯಾವುದೇ ಸಹಾಯಕ್ಕಾಗಿ, ಸನಿಹದ ಆರೋಗ್ಯ ಕೇಂದ್ರಗಳು ಅಥವಾ ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸುವಂತೆಯೂ ಸೂಚಿಸಲಾಗಿದೆ.