ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (ಎನ್‌ಎಂಸಿ) ಜಾಗತಿಕವಾಗಿ ವೈದ್ಯಕೀಯ ಶಿಕ್ಷಣದ ಗುಣಮಟ್ಟ ವೃದ್ಧಿಗೆ ಮೀಸಲಾಗಿರುವ ವೈದ್ಯಕೀಯ ಶಿಕ್ಷಣಕ್ಕಾಗಿ ವಿಶ್ವ ಒಕ್ಕೂಟದ (ಡಬ್ಲ್ಯುಎಫ್‌ಎಂಇ) ಅಧಿಕೃತ ಮಾನ್ಯತೆ ಸಿಕ್ಕಿದೆ.
ಅಮೆರಿಕ, ಕೆನಡಾ, ಆಸ್ಟೇಲಿಯಾ ಹಾಗೂ ನ್ಯೂಜಿಲೆಂಡ್‌ನಲ್ಲಿ ವೈದ್ಯಕೀಯ ವೃತ್ತಿ ಅಭ್ಯಾಸ ಅಥವಾ ಸ್ನಾತಕೋತ್ತರ ಅಧ್ಯಯನದ ಗುರಿ ಹೊಂದಿರುವ ಭಾರತೀಯ ವೈದ್ಯಕೀಯ ಪದವೀಧರರ ಹಾದಿಯನ್ನು ಈ ಮನ್ನಣೆಯು ಸುಗಮಗೊಳಿಸಿದೆ.
ಎನ್‌ಎಂಸಿ ವ್ಯಾಪ್ತಿಗೆ ದೇಶದಾದ್ಯಂತ ಒಟ್ಟು 708 ವೈದ್ಯಕೀಯ ಕಾಲೇಜುಗಳು ಒಳಪಡುತ್ತವೆ. ಹಾಲಿ ಕಾಲೇಜುಗಳು ಸೇರಿದಂತೆ ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ಹೊಸದಾಗಿ ಸ್ಥಾಪನೆಯಾಗುವ ಕಾಲೇಜುಗಳಿಗೂ ಸ್ವಯಂಪ್ರೇರಿತವಾಗಿ ಡಬ್ಲ್ಯುಎಫ್‌ಎಂಇ ಅಧಿಕೃತ ಮನ್ನಣೆ ಸಿಗಲಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
'ಭಾರತೀಯ ವೈದ್ಯಕೀಯ ಪದವೀಧರರು ವಿಶ್ವದಾದ್ಯಂತ ತಮ್ಮ ವೃತ್ತಿ ಮುಂದುವರಿಸಲು ಇದು ಅವಕಾಶ ಕಲ್ಪಿಸಲಿದೆ. ಅಲ್ಲದೇ, ಭಾರತದತ್ತ ವಿದೇಶಿ ಪದವೀಧರರು ಆಕರ್ಷಿತರಾಗಲೂ ನೆರವಾಗುತ್ತದೆ' ಎಂದು ಎನ್‌ಎಂಸಿಯ ನೀತಿನಿಯಮಗಳು ಮತ್ತು ವೈದ್ಯಕೀಯ ನೋಂದಣಿ ಮಂಡಳಿಯ ಸದಸ್ಯ ಡಾ.ಯೋಗೇಂದ್ರ ಮಲಿಕ್ ಹೇಳಿದ್ದಾರೆ.
ಎನ್‌ಎಂಸಿಗೆ ಈ ಮನ್ನಣೆ ಕುರಿತು ಅಧಿಕೃತ ಪ್ರಶಸ್ತಿ ಪತ್ರ ಹಾಗೂ ಮಾನ್ಯತಾ ಪ್ರಮಾಣ ಪತ್ರ ಲಭಿಸಲಿದೆ.
'ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಗುಣಮಟ್ಟ ಮತ್ತು ಮಾನದಂಡಗಳನ್ನು ಉತ್ತಮಪಡಿಸಲು ಡಬ್ಲ್ಯುಎಫ್‌ಎಂಇ ಮನ್ನಣೆಯು ಸಹಕಾರಿಯಾಗಲಿದೆ. ವಿದೇಶಗಳಲ್ಲಿ ಸ್ನಾತಕೋತ್ತರ ಪದವಿಯ ತರಬೇತಿ ಹಾಗೂ ವೃತ್ತಿ ಅಭ್ಯಾಸಕ್ಕೆ ಒಕ್ಕೂಟದ ಮಾನ್ಯತೆ ಅತ್ಯಗತ್ಯ. ಈಗ ಆ ಕೊರತೆ ನೀಗಿದ. ಜಾಗತಿಕ ಮಟ್ಟದಲ್ಲಿ ಪದವೀಧರರು ಉತ್ತಮ ವೃತ್ತಿಪರತೆ ಬೆಳೆಸಿಕೊಳ್ಳಲೂ ನೆರವಾಗಲಿದೆ' ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ದೇಶದ ವೈದ್ಯಕೀಯ ಕಾಲೇಜುಗಳು ಮತ್ತು ವೃತ್ತಿಪರರಿಗೆ ಜಾಗತಿಕ ಮನ್ನಣೆ ಮತ್ತು ಪ್ರಸಿದ್ಧಿ ಪಡೆಯಲು ವೇದಿಕೆ ಕಲ್ಪಿಸಿದೆ. ಜೊತೆಗೆ, ಶೈಕ್ಷಣಿಕ ಸಹಯೋಗ ಮತ್ತು ವಿನಿಮಯಕ್ಕೂ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರಿಂದ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಹಾಗೂ ಹೊಸ ಅನ್ವಷಣೆಗಳಿಗೆ ಉತ್ತೇಜನ ನೀಡಲು ಅನುಕೂಲವಾಗಲಿದೆ. ವೈದ್ಯಕೀಯ ಶಿಕ್ಷಣ ತಜ್ಞರು ಹಾಗೂ ಸಂಸ್ಥೆಗಳ ಗುಣಮಟ್ಟಕ್ಕೆ ಪ್ರೋತ್ಸಾಹ ನೀಡಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.