ತಿರುವನಂತಪುರಂ: ಮಲಯಾಳಂ ನಟಿ ಅಪರ್ಣಾ ನಾಯರ್ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಗಂಡನ ಕುಡಿತ ಚಟಕ್ಕೆ ಬೇಸತ್ತು ಸಾವಿಗೆ ಶರಣಾಗಿದ್ದಾಳೆ ಎಂದು ಮೊದಲು ಹೇಳಲಾಗಿತ್ತು. ಇದೀಗ ಅಪರ್ಣಾ ಸಹ ಆತ್ಮಹತ್ಯೆಗೂ ಮುನ್ನ ಮದ್ಯಪಾನ ಮಾಡಿದ್ದಳು ಎಂದು ಸ್ವತಃ ಆಕೆಯ ಗಂಡ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಕೇರಳದ ಕರಮಾನ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಅಪರ್ಣಾ ಪತಿ ಸಂಜಿತ್ ಹೇಳಿಕೆ ನೀಡಿದ್ದಾರೆ. ಘಟನೆ ನಡೆಯುವ ದಿನ ಅಪರ್ಣಾ ಕುಡಿದಿದ್ದಳು, ಇದೇ ವಿಚಾರಣಕ್ಕೆ ನನ್ನ ಮತ್ತು ಆಕೆಯ ನಡುವೆ ಜಗಳ ನಡೆದಿತ್ತು ಎಂದು ತಿಳಿಸಿದ್ದಾರೆ.
ಅದೇ ದಿನ ಬೆಳಗ್ಗೆ ಅಟ್ಟುಕಾಲ್ ದೇವಸ್ಥಾನಕ್ಕೆ ದಂಪತಿ ಭೇಟಿ ಮಾಡಿದ್ದಾರೆ. ಅಲ್ಲದೆ, ರಾತ್ರಿ ಓಣಂ ಆಚರಣೆಯನ್ನು ನೋಡಲು ನಿರ್ಧಾರ ಮಾಡಿದ್ದರು. ಆದರೆ, ಅಪರ್ಣಾ ಮದ್ಯ ಸೇವಿಸಿದ್ದನ್ನು ನೋಡಿದ ಸಂಜಿತ್, ಆಕೆಯನ್ನು ಪ್ರಶ್ನಿಸಿದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ.
ಜಗಳದ ನಡುವೆ ಸಂಜಿತ್ ತುಂಬಾ ಕೋಪದಿಂದ ತನ್ನ ಮಗಳನ್ನು ಕರೆದುಕೊಂಡು ಮನೆಯಿಂದ ಹೊರ ಹೋಗಿದ್ದಾನೆ. ಆತ ಮೆಟ್ಟುಕಾಡಕ್ಕೆ ತೆರಳಿದಾಗ ಫೋನ್ ಕರೆ ಬಂದಿದ್ದು, ಆತ್ಮಹತ್ಯೆಗೆ ಯತ್ನಿಸುತ್ತಿರುವುದಾಗಿ ಅರ್ಪಣಾ ಹೇಳಿದ್ದಾಳೆ. ಇದನ್ನು ಕೇಳಿದ ಕೂಡಲೇ ಸಂಜಿತ್ ಮನಗೆ ಧಾವಿಸಿದ್ದು, ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಾಳೆ
ಗಲಾಟೆ ಸಂದರ್ಭದಲ್ಲಿ ಸಂಜಿತ್ ತಲೆಗೆ ಅಪರ್ಣಾ ಬಾಟಲಿಯಿಂದ ಹೊಡೆದಿರುವುದಾಗಿ ಆಕೆಯ ಮೂರು ವರ್ಷದ ಮಗಳು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಸದ್ಯ ಹೇಳಿಕೆಯನ್ನು ದಾಖಲಿಸಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಏನಿದು ಪ್ರಕರಣ?
ಕೇರಳದ ಕರಮಾನದ ಖಾಸಗಿ ಆಸ್ಪತ್ರೆಯಲ್ಲಿ ಸ್ವಾಗತಕಾರಿಣಿಯಾಗಿದ್ದ ಅಪರ್ಣಾ ಎರಡು ವಾರಗಳ ಹಿಂಷ್ಟೇ ರಾಜೀನಾಮೆ ನೀಡಿದ್ದರು. ಮನೆಯ ಕೊಠಡಿಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆಯ ಪತಿ, ಆ.31ರಂದು ಕುಟುಂಬಸ್ಥರಿಗೆ ತಿಳಿಸಿದ ಬಳಿಕ ಅದೇ ದಿನ ರಾತ್ರಿ 7.30ರ ಸುಮಾರಿಗೆ ಅಪರ್ಣಾ ಅವರನ್ನು ಕರಮಾನ ಕಿಲ್ಲಿಪಾಲಂನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಪ್ರಯೋಜನವಾಗಲಿಲ್ಲ. ಇದಾದ ಬಳಿಕ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದರು. ಆದರೆ, ಅಪರ್ಣಾ ಸಾವಿಗೆ ಗಂಡನ ಕುಡಿತದ ಚಟ ಮತ್ತು ಕೌಟುಂಬಿಕ ಸಮಸ್ಯೆಗಳೇ ಕಾರಣ ಎಂದು ಅಪರ್ಣಾ ಪಾಲಕರು ಆರೋಪ ಮಾಡಿದರು.
ಸಾವಿಗೂ ಕೆಲವೇ ಗಂಟೆಗಳಿಗೂ ಮುನ್ನ ಅಪರ್ಣಾ, ತನ್ನ ತಾಯಿಗೆ ವಿಡಿಯೋ ಕಾಲ್ ಮಾಡಿ, ಕುಟುಂಬದಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಿದ್ದರು. ಗಂಡನ ಕುಡಿತದ ಚಟದಿಂದ ಮಾನಸಿಕ ತೊಂದರೆಗೆ ಒಳಗಾಗಿದ್ದಳು. ಆದಷ್ಟು ಬೇಗ ಈ ಸ್ಥಳವನ್ನು ತೊರೆಯುತ್ತೇನೆ ಎಂದು ಹೇಳಿದ್ದಳು. ಫೋನ್ನಲ್ಲಿ ಮಾತನಾಡುವಾಗ ಅಪರ್ಣಾ ಅಳುತ್ತಿದ್ದಳು ಎಂದು ಆಕೆಯ ತಾಯಿ ತಿಳಿಸಿದ್ದರು. ಆದರೆ ಇದೀಗ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಅಪರ್ಣಾ ಸಹ ಕುಡಿತದ ಚಟ ಹೊಂದಿದ್ದಳು ಎನ್ನಲಾಗಿದೆ.
ಅಂದಹಾಗೆ ಅಪರ್ನಾ ಅವರು ಮೇಘತೀರ್ಥಂ, ಮುದ್ದುಗೌವ್, ಅಚಾಯನ್ಸ್, ಕೊಡತಿ ಸಮಕ್ಷಮ್ ಬಾಲನ್ ವಕೀಲ್ ಹಾಗೂ ಕಲ್ಕಿ ಮುಂತಾದ ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಚಂದನಮಜ ಮತ್ತು ಆತ್ಮಸಖಿಯಂತಹ ಧಾರಾವಾಹಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅಪರ್ಣಾಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರ ಹೆಸರು ತ್ರಯಾ ಮತ್ತು ಕೃತಿಕಾ.