ನವದೆಹಲಿ: ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸ್ಥಾನ ಮೀಸಲಿಡುವ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ನಡೆಯನ್ನು ಬಹುಭಾಷಾ ನಟಿ ತಮನ್ನಾ ಶ್ಲಾಘಿಸಿದ್ದಾರೆ. ಬಾಲಿವುಡ್‌ನ ಹಲವು ನಟಿಯರು ಸಹ ಮಸೂದೆಯನ್ನು ಸ್ವಾಗತಿಸಿದ್ದಾರೆ.
ನವದೆಹಲಿ: ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸ್ಥಾನ ಮೀಸಲಿಡುವ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ನಡೆಯನ್ನು ಬಹುಭಾಷಾ ನಟಿ ತಮನ್ನಾ ಶ್ಲಾಘಿಸಿದ್ದಾರೆ. ಬಾಲಿವುಡ್‌ನ ಹಲವು ನಟಿಯರು ಸಹ ಮಸೂದೆಯನ್ನು ಸ್ವಾಗತಿಸಿದ್ದಾರೆ.
ಈ ಮಸೂದೆಯು ಸಾಮಾನ್ಯ ಜನರಿಗೆ ರಾಜಕೀಯಕ್ಕೆ ಬರಲು ಸ್ಫೂರ್ತಿ ತುಂಬುತ್ತದೆ ಎಂದು ನಟಿ ತಮನ್ನಾ ಹೇಳಿದ್ದಾರೆ. ರಾಜಕೀಯಕ್ಕೆ ಪ್ರವೇಶಿಸುವುದರ ಬಗ್ಗೆ ಜನ ಮೂಗು ಮುರಿಯುವುದೇ ಹೆಚ್ಚು. ಮಹಿಳಾ ಮೀಸಲಾತಿ ಜಾರಿಗೆ ಮುಂದಾಗಿರುವುದನ್ನು ಕಂಡಾಗ ರಾಜಕೀಯಕ್ಕೆ ಬರಲು ಸ್ಫೂರ್ತಿಯಾಗುತ್ತದೆ ಎಂದಿದ್ದಾರೆ.
ಸಂಸತ್ತಿಗೆ ಭೇಟಿ ನೀಡಿದ್ದ ನಟಿ ದಿವ್ಯಾ ದತ್ತ, 'ಮಹಿಳಾ ಮೀಸಲಾತಿ ಮಸೂದೆಯು ಸರ್ಕಾರದ ಬಹುದೊಡ್ಡ ಉಪಕ್ರಮವಾಗಿದೆ. ಅತ್ಯಂತ ಖುಷಿಯಾಗುತ್ತಿದೆ. ಈ ಮೂಲಕ ಮಹಿಳೆಯರನ್ನು ಮುಂಚೂಣಿಗೆ ತರಲಾಗುತ್ತಿದೆ' ಎಂದು ಹೇಳಿದ್ದಾರೆ.
'ಇದೊಂದು ಅತ್ಯದ್ಭುತ ನಡೆ. ನಮಗೆ ಹಕ್ಕುಗಳು ಮತ್ತು ಸಮಾನತೆಯನ್ನು ನೀಡಿದರೆ ಪೋಷಕರೂ ಹೆಣ್ಣುಮಕ್ಕಳನ್ನು ಬೆಂಬಲಿಸುತ್ತಾರೆ. ನಾನು ಒಂದು ಪುಟ್ಟ ಹಳ್ಳಿಯಿಂದ ಬಂದವಳು. ಮಹಿಳೆಯರು ಮದುವೆಯಾದಾಗ ಮಾತ್ರ ಅವರು ಸೆಟಲ್ ಆಗುತ್ತಾರೆ ಎಂಬ ಭಾವನೆ ಅಲ್ಲಿತ್ತು. ಹೆಣ್ಣು ಮತ್ತು ಗಂಡು ಮಕ್ಕಳನ್ನು ಸಮಾನವೆಂದು ನಡೆಸಿಕೊಳ್ಳುವ ಪದ್ಧತಿ ಆರಂಭವಾದರೆ ದೇಶದಲ್ಲಿ ಬಹಳಷ್ಟು ಬದಲಾವಣೆ ಆಗುತ್ತದೆ ಎಂದು ನಟಿ ಶೆಹನಾಜ್ ಗಿಲ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆಯಾದ ಮಂಗಳವಾರದ ದಿನ ಹೊಸ ಸಂಸತ್ ಭವನಕ್ಕೆ ಆಗಮಿಸಿದ್ದ ನಟಿ ಕಂಗನಾ ರನೌತ್ ಕಲಾಪವನ್ನು ವೀಕ್ಷಿಸಿದರು. ಈ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಅವರು, ಇದೊಂದು ಐತಿಹಾಸಿಕ ದಿನ. ಇಡೀ ಸದನ ಮಹಿಳಾ ಮೀಸಲಾತಿ ಮಸೂದೆಗೆ ಮೀಸಲಾಗಿದೆ. ಪುರುಷ ಪ್ರಧಾನ ರಾಜಕೀಯದಲ್ಲಿ ಮಹಿಳೆಯರು ತೊಡಗಿಸಿಕೊಳ್ಳುವುದು ಕಷ್ಟ. ಕಿರುಕುಳಕ್ಕೆ ಒಳಗಾಗುತ್ತಾರೆ. ಇಂತಹ ಸಂದರ್ಭದಲ್ಲಿ ಮೀಸಲಾತಿಯ ಅಗತ್ಯವಿತ್ತು ಎಂದು ಅವರು ಹೇಳಿದ್ದರು.