ನವದೆಹಲಿ: 'ಸಂವಿಧಾನದ 370ನೇ ವಿಧಿಯಡಿ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಹಿಂಪಡೆಯಲಾಗಿದೆ. ಇದು ಕೇವಲ ಆಡಳಿತಾತ್ಮಕ ನಿರ್ಧಾರವಷ್ಟೇ ಆಗಿರಲಿಲ್ಲ' ಎಂದು ಹಿರಿಯ ವಕೀಲ ರಾಕೇಶ್ ದ್ವಿವೇದಿ ಸುಪ್ರೀಂಕೋರ್ಟ್‌ಗೆ ಶುಕ್ರವಾರ ತಿಳಿಸಿದರು.

ಈ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ಸದಸ್ಯರಿದ್ದ ನ್ಯಾಯಪೀಠ ನಡೆಸಿತು.
ಅರ್ಜಿದಾರ ಅಶ್ವಿನಿ ಉಪಾಧ್ಯಾಯ ಪರ ವಾದ ಮಂಡಿಸಿದ ಅವರು, 'ವಿಶೇಷ ಸ್ಥಾನಮಾನ ಹಿಂಪಡೆಯುವ ಕುರಿತು ತೀರ್ಮಾನ ಕೈಗೊಳ್ಳುವಾಗ ಜಮ್ಮು-ಕಾಶ್ಮೀರದ ಸಂಸದರನ್ನು ಸಹ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿತ್ತು' ಎಂದು ನ್ಯಾಯಪೀಠಕ್ಕೆ ತಿಳಿಸಿದರು.
'ಸಂವಿಧಾನದ 370ನೇ ವಿಧಿಯಲ್ಲಿನ 'ಶಿಫಾರಸು' ಎಂಬ ಪದವು ಜಮ್ಮು-ಕಾಶ್ಮೀರ ಸಂವಿಧಾನ ರಚನಾ ಸಮಿತಿ ಒಪ್ಪಿಗೆ ಬೇಕು ಎಂದು ಅರ್ಥವೇ ಹೊರತು, ಒಪ್ಪಿಗೆ ಅಗತ್ಯ ಎಂಬುದನ್ನು ಸೂಚಿಸುವುದಿಲ್ಲ' ಎಂದೂ ಹೇಳಿದರು.
'ಭಾರತದ ಸಂವಿಧಾನ ರಚನಾ ಸಮಿತಿಗೆ ಇದ್ದಂಥ ಸ್ವಾತಂತ್ರ್ಯವನ್ನು ಜಮ್ಮು-ಕಾಶ್ಮೀರ ಸಂವಿಧಾನ ರಚನಾ ಸಮಿತಿ ಹೊಂದಿರಲಿಲ್ಲ' ಎಂದು ಹೇಳುವ ಮೂಲಕ ಎರಡು ಸಂವಿಧಾನ ರಚನಾ ಸಮಿತಿಗಳ ನಡುವಿನ ವ್ಯತ್ಯಾಸವನ್ನು ದ್ವಿವೇದಿ ಅವರು ನ್ಯಾಯಪೀಠದ ಗಮನಕ್ಕೆ ತರುವ ಪ್ರಯತ್ನ ಮಾಡಿದರು.
ಇತರ ಕೆಲ ಅರ್ಜಿದಾರರ ಪರ ವಕೀಲರ ವಾದಗಳನ್ನು ಆಲಿಸಿದ ನ್ಯಾಯಪೀಠವು ವಿಚಾರಣೆಯನ್ನು ಸೆಪ್ಟೆಂಬರ್ 4ಕ್ಕೆ ಮುಂದೂಡಿತು.