ಮಂಜೇಶ್ವರ : ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ಕೃಪಾಪೋಷಿತ ಯಕ್ಷಗಾನ ಕಲಾಸಂಘ ಮತ್ತು ಅಧ್ಯಯನ ಕೇಂದ್ರದ ನೇತೃತ್ವದಲ್ಲಿ ನಡೆದ ತೆಂಕುತಿಟ್ಟು ಯಕ್ಷಗಾನ ಬಣ್ಣಗಾರಿಕೆ ತರಬೇತಿಯನ್ನು ತೆಂಕುತಿಟ್ಟಿನ ಹಿರಿಯ ಕಲಾವಿದ ಪೆರ್ಮುದೆ ಜಯಪ್ರಕಾಶ ಶೆಟ್ಟಿ ದೀಪಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಿರಂತರ ಅಧ್ಯಯನ, ಪರಿಶ್ರಮ, ಹಿರಿಯ ಅನುಭವಿ ಕಲಾವಿದರ ಮಾರ್ಗದರ್ಶನ ಪಡೆದು ಯಕ್ಷಗಾನಕಲೆಯಲ್ಲಿ ತೊಡಗಿಸಿಕೊಂಡಲ್ಲಿ ಉತ್ತಮ ಕಲಾವಿದನಾಗಿ ರೂಪುಗೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿ ನಿಕಟಪೂರ್ವ ಸದಸ್ಯ , ಪ್ರಸಂಗಕರ್ತ ಯೋಗೀಶ ರಾವ್ ಚಿಗುರುಪಾದೆ ಮಾತನಾಡಿ ಹವ್ಯಾಸಿ ಕಲಾವಿದರಿಗೆ ಇಂದು ವೇದಿಕೆ ಅವಕಾಶ ಲಭ್ಯತೆಯ ಕೊರತೆ ಇದೆ. ಕಲಾ ಪೋಷಕರು, ಹವ್ಯಾಸಿ ಕಲಾವಿದರನ್ನೂ ವೇದಿಕೆ ಒದಗಿಸಿ ಪ್ರೋತ್ಸಾಹಿಸಬೇಕಿದೆ. ಯುವ ಕಲಾ ಪೀಳಿಗೆಯವರು ಯಕ್ಷಗಾನದ ಹೆಜ್ಜೆಗಾರಿಕೆ, ಮುಖವರ್ಣಿಕೆ ಆಹಾರ್ಯಗಳ ವಿಚಾರದಲ್ಲಿ ಹಿರಿಯ ವಿದ್ವಾಂಸರು, ಕಲಾವಿದರ ಮಾರ್ಗದರ್ಶನ ಪಡೆದು ಮುನ್ನಡೆಯಬೇಕಿದೆ ಎಂದರು.
ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಚಕ್ರತೀರ್ಥ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ನ್ಯಾಯವಾದಿ ಶರತ್ ಕುಮಾರ್ ಶೆಟ್ಟಿ, ರಾಜಾರಾಮ ಹೊಳ್ಳ ಕೈರಂಗಳ, ಶೋಭಾ ಪಿ ಪೂಂಜ ಬೊಟ್ಟಿಗೆರೆ ಉಪಸ್ಥಿತರಿದ್ದರು. ದೀವಿತ್ ಎಸ್ ಕೆ ಪೆರಾಡಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಯಕ್ಷಗಾನ ಕಲಾವಿದ ಸಂಘದ ಗುರುಗಳಾದ ಅಶ್ವಥ್ ಮಂಜನಾಡಿ ಅವರನ್ನು ಗೌರವಿಸಲಾಯಿತು.
ವಿದ್ಯಾಧರ ಶೆಟ್ಟಿ ಪೊಸಕುರಲ್ ಸ್ವಾಗತಿಸಿ, ಗಣೇಶ್ ಕುಂಜತ್ತೂರು ನಿರೂಪಿಸಿದರು. ದಾಮೋದರ ಶೆಟ್ಟಿ ಕುಂಜತ್ತೂರು ವಂದಿಸಿದರು.