ನವದೆಹಲಿ: ಮ್ಯಾನ್ಮಾರ್‌ನ ಬಂಡುಕೋರ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದ ಶಂಕಿತ ಭಯೋತ್ಪಾದಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ.
ಮಣಿಪುರದ ಮೋಇರಂಗಥೆಮ್ ಆನಂದ್ ಸಿಂಗ್ ಬಂಧಿತ. ಈತ ಇಲ್ಲಿನ ಜನಾಂಗೀಯ ಹಿಂಸಾಚಾರವನ್ನು ದುರ್ಬಳಕೆ ಮಾಡಿಕೊಂಡು ಭಾರತದ ವಿರುದ್ಧ ಯುದ್ಧ ನಡೆಸಲು ಸಂಚು ರೂಪಿಸಿದ್ದ.
ಪೊಲೀಸರ ಶಸ್ತ್ರಾಗಾರದಿಂದ ಲೂಟಿ ಮಾಡಿದ್ದ ಶಸ್ತ್ರಗಳನ್ನು ಹೊಂದಿದ್ದಕ್ಕಾಗಿ ಮಣಿಪುರದ ಪೊಲೀಸರು ಐವರನ್ನು ಬಂಧಿಸಿದ್ದರು. ಇವರಲ್ಲಿ ಸಿಂಗ್ ಸಹ ಒಬ್ಬ.
ಶುಕ್ರವಾರವಷ್ಟೇ ಸ್ಥಳೀಯ ನ್ಯಾಯಾಲಯವು ಇವರಿಗೆ ಜಾಮೀನು ನೀಡಿತ್ತು. ಸಿಂಗ್‌ನನ್ನು ತಕ್ಷಣವೇ ಬಂಧಿಸಿದ ಎನ್‌ಐಎ, ರಾಷ್ಟ್ರೀಯ ರಾಜಧಾನಿಗೆ ಕರೆತರುವ ಮುನ್ನ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿತ್ತು.
ಮಣಿಪುರದಲ್ಲಿ ಪ್ರಸ್ತುತ ನಡೆದಿರುವ ಜನಾಂಗೀಯ ಹಿಂಸಾಚಾರವನ್ನು ಬಳಸಿಕೊಂಡು, ಕೇಂದ್ರ ಸರ್ಕಾರದ ವಿರುದ್ಧ ಯುದ್ಧ ನಡೆಸಲು ಮ್ಯಾನ್ಮಾರ್ ಮೂಲದ ಭಯೋತ್ಪಾದಕ ಗುಂಪುಗಳು ನಡೆಸಿದ 'ರಾಷ್ಟ್ರದ ಗಡಿಯಾಚೆಗಿನ ಪಿತೂರಿ'ಗೆ ಸಂಬಂಧಿಸಿದ ಪ್ರಕರಣದಲ್ಲಿ ಸಿಂಗ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜುಲೈ 19ರಂದು ಎನ್‌ಐಎ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ನಿಷೇಧಿತ ಭಯೋತ್ಪಾದಕ ಗುಂಪುಗಳು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಮಣಿಪುರದಲ್ಲಿನ ಅಶಾಂತಿಯನ್ನು ಬಳಸಿಕೊಂಡು, ತಳಹಂತದಲ್ಲಿ ಕಾರ್ಯಕರ್ತರು, ಬೆಂಬಲಿಗರನ್ನು ನೇಮಿಸಿಕೊಳ್ಳುತ್ತಿವೆ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದಿದ್ದಾರೆ.
ಬಂಧಿತ ಸಿಂಗ್‌ನನ್ನು ಶನಿವಾರ ದೆಹಲಿಗೆ ಕರೆತಂದ ಎನ್‌ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ತನಿಖೆಗಾಗಿ ಐದು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.