ತಿರುವನಂತಪುರ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇರಳದ ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸದಂತೆ ಮನವಿ ಮಾಡಲು ಸಿಪಿಐ ಪಕ್ಷ ನಿರ್ಧರಿಸಿದೆ.
ಸಿಪಿಐನ ರಾಷ್ಟ್ರೀಯ ನಾಯಕತ್ವ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದನ್ನು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ತಿಳಿಸಲಾಗುವುದು ಎಂದು ಮೂಲಗಳು ಹೇಳಿವೆ.
ರಾಹುಲ್ ಗಾಂಧಿ ಅವರು ಬಿಜೆಪಿ ಅಭ್ಯರ್ಥಿಯ ವಿರುದ್ಧ ಕಣಕ್ಕಿಳಿಯಬೇಕು. ಪಕ್ಷವು ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಒಕ್ಕೂಟದ ಭಾಗವಾಗಿರುವುದರಿಂದ, ರಾಹುಲ್ ಅವರು ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂಬುದನ್ನು ಖಚಿತಪಡಿಸಬೇಕು ಎಂದು ಸಿಪಿಐ ಬಯಸುತ್ತಿದೆ ಎನ್ನಲಾಗಿದೆ.
2009ರಲ್ಲಿ ವಯನಾಡ್ ಕ್ಷೇತ್ರ ರಚನೆಯಾದ ಬಳಿಕ ನಡೆದ ಮೂರು ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಗೆಲುವು ಸಾಧಿಸಿದೆ. 2019ರಲ್ಲಿ ಈ ಕ್ಷೇತ್ರದಿಂದ ಕಣಕ್ಕಿಳಿದಿದ್ದ ರಾಹುಲ್ ಗಾಂಧಿ, ಬರೋಬ್ಬರಿ 4.31 ಲಕ್ಷ ಮತಗಳ ಅಂತರದಿಂದ ಜಯ ಸಾಧಿಸಿದ್ದರು.
ಕೇರಳದಲ್ಲಿ ಒಟ್ಟು 20 ಲೋಕಸಭಾ ಕ್ಷೇತ್ರಗಳಿವೆ. ಎಡ ಪಕ್ಷಗಳ ಮೈತ್ರಿಕೂಟ ಲೆಫ್ಟ್ ಡೆಮಾಕ್ರಟಿಕ್ ಅಲಯನ್ಸ್‌ನಲ್ಲಿರುವ (ಎಲ್‌ಡಿಎಫ್) ಸಿಪಿಐ ನಾಲ್ಕು ಕ್ಷೇತ್ರಗಳಲ್ಲಿ ಮಾತ್ರವೇ ಕಣಕ್ಕಿಳಿಯುತ್ತದೆ.
2019ರ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನಗಳನ್ನು ಹಾಗೂ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಅಲಯನ್ಸ್ (ಯುಡಿಎಫ್) 18 ಸ್ಥಾನಗಳನ್ನು ಜಯಿಸಿತ್ತು. ಎಲ್‌ಡಿಎಫ್ ಕೇವಲ ಎರಡು ಸ್ಥಾನಗಳನ್ನು ಗೆದ್ದಿತ್ತು. ರಾಹುಲ್ ಗಾಂಧಿ ವಯನಾಡ್‌ನಲ್ಲಿ ಸ್ಪರ್ಧಿಸಿದ್ದ ಕಾರಣ ಕೇರಳದಲ್ಲಿ ಎಲ್‌ಡಿಎಫ್ ತೀವ್ರ ಹಿನ್ನಡೆ ಎದುರಿಸಬೇಕಾಯಿತು ಎಂದು ಹೇಳಲಾಗುತ್ತಿದೆ.
ಸಿಪಿಐ ನಿರ್ಧಾರದ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಕೆ.ಸುಧಾಕರನ್, ಬೇರೆ ಪಕ್ಷದಿಂದ ಯಾರು ಸ್ಪರ್ಧಿಸಬೇಕು ಎಂಬುದನ್ನು ಸಿಪಿಐ ಅಥವಾ ಮೈತ್ರಿಕೂಟ ನಿರ್ಧರಿಸಲಾಗದು ಎಂದಿದ್ದಾರೆ.