ತಿರುವನಂತಪುರ (PTI): ಸಮಾಜ ಸುಧಾರಕ 'ಮಹಾತ್ಮ ಅಯ್ಯಂಕಾಳಿ' ಸ್ಮಾರಕವನ್ನು ಅವಮಾನಿಸಿ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಪೋಸ್ಟ್ ಮಾಡುವುದರ ಕುರಿತ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ಕೇರಳ ಸರ್ಕಾರ ರಚಿಸಿದೆ.
ವಿಧಾನಸಭೆಯಲ್ಲಿ ಮಂಗಳವಾರ ಪ್ರತಿಪಕ್ಷದ ನಾಯಕ ವಿ.ಡಿ.ಸತೀಶನ್ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, 'ತೆರೆಮರೆಯಲ್ಲಿದ್ದು ಅಥವಾ ನೇರವಾಗಿ ಪೋಸ್ಟ್ ಮಾಡುವವರ ವಿರುದ್ಧ ಕಠಿಣಕ್ರಮ ಜರುಗಿಸಲಾಗುವುದು' ಎಂದು ತಿಳಿಸಿದರು.
ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್‌ಗಳಿಗೆ ಸಂಬಂಧಿಸಿ ಈಗಾಗಲೇ ಎರಡು ದೂರುಗಳು ಬಂದಿವೆ. ಐಪಿಸಿ ಕಾಯ್ದೆ ಮತ್ತು ಪರಿಶಿಷ್ಟ ಜಾತಿ, ಪಂಗಡ (ದೌರ್ಜನ್ಯ ತಡೆ) ಕಾಯ್ದೆಯನ್ವಯ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದರು.
ಈಚೆಗೆ ನಡೆದಿದ್ದ 'ವಿಲ್ಲುವಂಡಿ ಸಮರಂ (ಎತ್ತಿನಗಾಡಿ ಪ್ರತಿಭಟನೆ)' ಅವಮಾನಿಸಿಯೂ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿತ್ತು. ಫೇಸ್‌ಬುಕ್ ಪರಿಶೀಲಿಸಿದಾಗ, ಗುಂಪೊಂದರ ಹೆಸರಿನಲ್ಲಿ ಹಲವು ಖಾತೆಗಳಿರುವುದು ಗೊತ್ತಾಗಿದೆ. ಈ ಗುಂಪಿನ ಕುರಿತು ವಿವರ ಕೋರಲಾಗಿದೆ. ಖಾತೆಯನ್ನು ಬ್ಲಾಕ್ ಮಾಡಿಸಲು ಕ್ರಮವಹಿಸಲಾಗಿದೆ ಎಂದು ವಿವರಿಸಿದರು.
ಕಾನೂನು ಕ್ರಮದ ಹೊರತಾಗಿ ಸರ್ಕಾರ ರಾಜಧಾನಿಯಲ್ಲಿನ ವಿಜೆಟಿ ಸಭಾಂಗಣಕ್ಕೆ ಸಮಾಜ ಸುಧಾರಕರ ಹೆಸರಿಡಲು ಕ್ರಮ ವಹಿಸುತ್ತಿದೆ. ಅಯ್ಯಂಕಾಳಿ ಸ್ಮಾರಕಕ್ಕೆ ಅವಮಾನಿಸುವುದು ಇತಿಹಾಸದಲ್ಲಿ ದಾಖಲಾಗಿರುವ ಕೇರಳದ ಹೋರಾಟಕ್ಕೆ ಅಪಮಾನಿಸಿದಂತೆಯೇ ಆಗಿದೆ. ಸಮಾಜ ಇದಕ್ಕೆ ಅವಕಾಶ ನೀಡಬಾರದು ಎಂದು ಮುಖ್ಯಮಂತ್ರಿ ತಿಳಿಸಿದರು.