ಇಡುಕ್ಕಿ: ರಾಜ್ಯದ ಅತಿ ದೊಡ್ಡ ವಿದ್ಯುತ್ ಯೋಜನೆಯ ಭಾಗವಾಗಿರುವ ಇಡುಕ್ಕಿಯ ಚೆರುತೋಣಿ ಅಣೆಕಟ್ಟಿನಲ್ಲಿ ಭದ್ರತಾ ಲೋಪವೆಸಗಿರುವ ಬಗ್ಗೆ ತನಿಖೆ ಪ್ರಗತಿಯಲ್ಲಿದೆ.
ಅಕ್ರಮ ಪ್ರವೇಶ ಮಾಡಿದ ವ್ಯಕ್ತಿ ಒಟ್ಟಪಾಲಂ ನಿವಾಸಿ ಎಂದು ಪೋಲೀಸರು ಪತ್ತೆಹಚ್ಚಿದ್ದಾರೆ. ಘಟನೆ ಬಳಿಕ ವಿದೇಶಕ್ಕೆ ತೆರಳಿರುವ ಆರೋಪಿಯನ್ನು ವಾಪಸ್ ಕರೆತರಲು ಪೋಲೀಸರು ಪ್ರಯತ್ನ ಆರಂಭಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಘಟನೆ ಜುಲೈ 22 ರಂದು ನಡೆದಿತ್ತು. ಒಟ್ಟಪಾಲಂನ ಯುವಕನೋರ್ವ ಹಗಲು ಮೂರು ಗಂಟೆಗೆ ಅಣೆಕಟ್ಟನ್ನು ತಲುಪಿದ್ದ. ಸಂದರ್ಶಕರ ಪಾಸ್ ತೆಗೆದುಕೊಂಡು ಹೈ ಮಾಸ್ ದೀಪ ಏರಿದ್ದ ಎನ್ನಲಾಗಿದೆ. ಈ ರೀತಿಯಾಗಿ, 11 ಸ್ಥಳಗಳಲ್ಲಿ ಪ್ರವೇಶಿಸಿರುವುದೂ ಕಂಡುಬಂದಿದೆ. ಅಲ್ಲದೆ, ಅಣೆಕಟ್ಟಿನ ಶಟರ್ ಎತ್ತುವ ಕಬ್ಬಿಣದ ರಾಡ್‍ಗೆ ದ್ರವವನ್ನು ಸುರಿಯಲಾಗಿದೆ. ಆದರೆ ಘಟನೆ ನಡೆದ ನಂತರ ಗುರುವಾರವಷ್ಟೇ ಕೆಎಸ್‍ಇಬಿ ಅಧಿಕಾರಿಗಳ ಗಮನಕ್ಕೆ ಬಂದಿದೆ.
ಹೆಚ್ಚಿನ ತನಿಖೆ ನಡೆಸಿದಾಗ ಒಟ್ಟಪಾಲಂ ಮೂಲದವನೇ ಈ ಕೃತ್ಯ ಎಸಗಿರುವುದು ಪತ್ತೆಯಾಗಿದೆ. ಬಾಡಿಗೆ ಕಾರಿನಲ್ಲಿ ಇಡುಕ್ಕಿ ತಲುಪಿದ್ದ. ಈತನಿಗೆ ವಿದೇಶದಿಂದ ಕಾರನ್ನು ಬಾಡಿಗೆಗೆ ನೀಡಿದ್ದ ಇಬ್ಬರನ್ನು ಪೋಲೀಸರು ವಿಚಾರಣೆ ನಡೆಸಿದ್ದಾರೆ. ಗುಪ್ತಚರ ಸಂಸ್ಥೆಗಳು ಘಟನೆಯ ಬಗ್ಗೆ ತನಿಖೆ ನಡೆಸುತ್ತಿವೆ. ಪೋಲೀಸರ ವೈಫಲ್ಯದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಈತ ಯಾಕೆ ಹೀಗೆ ಮಾಡಿದನು ಮತ್ತು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆಯೇ ಎಂಬ ಬಗ್ಗೆ ಪ್ರಮುಖವಾಗಿ ತನಿಖೆ ನಡೆಸಲಾಗುತ್ತಿದೆ. ಭಯೋತ್ಪಾದನಾ ನಿಗ್ರಹ ದಳ ಕೂಡ ಅಣೆಕಟ್ಟೆಯನ್ನು ಪರಿಶೀಲಿಸಿದೆ.