ಇಂಫಾಲ್: ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ವರದಿಗಾರಿಕೆ ಮತ್ತು ಸರ್ಕಾರದ ನಿಲುವಿನ ಬಗ್ಗೆ ಭಾರತೀಯ ಸಂಪಾದಕರ ಒಕ್ಕೂಟ (ಇಜಿಐ) ಪ್ರಕಟಿಸಿರುವ ಸತ್ಯಶೋಧನಾ ವರದಿಯು ಪ್ರಚೋದನಕಾರಿಯಾಗಿದೆ ಎಂದು ಮಣಿಪುರ ಸರ್ಕಾರವು ಆರೋಪಿಸಿದ್ದು, ಒಕ್ಕೂಟದ ಅಧ್ಯಕ್ಷೆ ಹಾಗೂ ತಂಡದ ಮೂವರು ಸದಸ್ಯರ ವಿರುದ್ಧ ಸೋಮವಾರ ಎಫ್‌ಐಆರ್ ದಾಖಲಿಸಿದೆ.
ಒಕ್ಕೂಟದ ಅಧ್ಯಕ್ಷೆ ಸೀಮಾ ಮುಸ್ತಾಫ, ಸದಸ್ಯರಾದ ಸೀಮಾ ಗುಹಾ, ಭರತ್ ಭೂಷಣ್ ಹಾಗೂ ಸಂಜಯ್ ಕಪೂರ್ ವಿರುದ್ಧ ದೂರು ದಾಖಲಿಸಲಾಗಿದೆ.
ಐಪಿಸಿ ಸೆಕ್ಷನ್ 153ಎ (ಧಾರ್ಮಿಕ, ಹುಟ್ಟಿದ ಸ್ಥಳ, ಭಾಷೆ ಹಿನ್ನೆಲೆಯಲ್ಲಿ ಭಿನ್ನ ಗುಂಪುಗಳ ನಡುವೆ ದ್ವೇಷ ಹರಡುವಿಕೆ), 200 (ಸುಳ್ಳು ಘೋಷಣೆಯನ್ನು ಸತ್ಯವೆಂದು ಘೋಷಿಸುವುದು), 298 (ಧಾರ್ಮಿಕ ಭಾವನೆಗಳಿಗೆ ಧಕ್ಕೆ), ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಪ್ರೆಸ್ ಕೌನ್ಸಿಲ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಸಂಪಾದಕರ ಒಕ್ಕೂಟದ ಅಧ್ಯಕ್ಷೆ ಹಾಗೂ ಮೂವರು ಸದಸ್ಯರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ವಾಪಸ್ ಪಡೆಯುವಂತೆ ಪ್ರೆಸ್ ಕ್ಲಬ್ ಆಫ್ ಇಂಡಿಯಾ (ಪಿಸಿಐ) ಒತ್ತಾಯಿಸಿದೆ.
'ಮಣಿಪುರದಲ್ಲಿ ಶಾಂತಿ ಪುನರ್ ಸ್ಥಾಪಿಸುವ ಬದಲಿಗೆ ಸುದ್ದಿ ಮಾಧ್ಯಮದವರ ಮೇಲೆ ದೂರು ದಾಖಲಿಸುವುದು ಸರಿಯಲ್ಲ. ಕೂಡಲೇ, ದೂರನ್ನು ಹಿಂದಕ್ಕೆ ಪಡೆಯಬೇಕು' ಎಂದು ಒತ್ತಾಯಿಸಿದೆ.
ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಎ ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಆದರೂ, ದೇಶದ ದೊಡ್ಡ ಮಾಧ್ಯಮ ಸಂಘಕ್ಕೆ ಬೆದರಿಕೆವೊಡ್ಡಲು ರಾಜ್ಯ ಸರ್ಕಾರವು ಈ ತಂತ್ರ ಅನುಸರಿಸಿದೆ ಎಂದು ದೂರಿದೆ.
ಒಕ್ಕೂಟದ ತಂಡವು ಇತ್ತೀಚೆಗೆ ಸಂಘರ್ಷ ಪೀಡಿತ ಕಣಿವೆ ರಾಜ್ಯಕ್ಕೆ ಭೇಟಿ ನೀಡಿತ್ತು. ಮೈತೇಯಿ ಮತ್ತು ಕುಕಿ ಬುಡಕಟ್ಟು ಸಮುದಾಯದ ನಡುವಿನ ಸಂಘರ್ಷ ಕುರಿತು ಕೆಲವು ಮಾಧ್ಯಮಗಳು ಏಕಪಕ್ಷೀಯ ವರದಿ ಪ್ರಕಟಿಸಿವೆ. ಇಂಟರ್‌ನೆಟ್ ಸೇವೆ ಸ್ಥಗಿತಗೊಂಡಿದೆ. ಇದರಿಂದ ಪತ್ರಕರ್ತರ ವರದಿಗಾರಿಕೆಗೆ ತೊಂದರೆಯಾಗಿದೆ. ಇದರ ಹಿಂದೆ ಸರ್ಕಾರದ ಪ್ರಭಾವವೂ ಇದೆ. ಜೊತೆಗೆ, ಸಂಘರ್ಷದ ಅವಧಿಯಲ್ಲಿ ಸರ್ಕಾರವು ಪಕ್ಷಪಾತಿಯಾಗಿ ವರ್ತಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಮಣಿಪುರ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮಣಿಪುರ ಸಂಪಾದಕರ ಒಕ್ಕೂಟ ಕೂಡ ಆಕ್ಷೇಪ ವ್ಯಕ್ತಪಡಿಸಿವೆ.
ಹಿಂಸಾಚಾರಕ್ಕೆ ಮತ್ತಷ್ಟು ಪ್ರಚೋದನೆ: ಬಿರೇನ್ ಸಿಂಗ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್, 'ಒಕ್ಕೂಟದ ಸದಸ್ಯರು ವರದಿ ಪ್ರಕಟಿಸುವ ಮೂಲಕ ರಾಜ್ಯದಲ್ಲಿ ಹಿಂಸಾಚಾರ ಮತ್ತಷ್ಟು ಉಲ್ಬಣಿಸಲು ಪ್ರಚೋದನೆ ನೀಡಿದ್ದಾರೆ' ಎಂದು ಆಪಾದಿಸಿದರು.
'ಸಂಘರ್ಷದಿಂದ ಹಲವರು ಜೀವ ಕಳೆದುಕೊಂಡಿದ್ದಾರೆ. ನೂರಾರು ಜನರಿಗೆ ನೆಲೆ ಇಲ್ಲದಂತಾಗಿದೆ. ಕಣಿವೆ ರಾಜ್ಯದ ಹಿನ್ನೆಲೆ, ಇತಿಹಾಸ ಹಾಗೂ ಹಿಂಸಾಚಾರದ ಜಟಿಲತೆಯನ್ನು ಅರ್ಥೈಸಿಕೊಳ್ಳದೆ ಏಕಪಕ್ಷೀಯವಾದ ವರದಿ ಪ್ರಕಟಿಸಲಾಗಿದೆ' ಎಂದು ದೂರಿದರು.
'ರಾಜ್ಯ ವಿರೋಧಿ, ರಾಷ್ಟ್ರ ವಿರೋಧಿ ಹಾಗೂ ಜನ ವಿರೋಧಿಯಾಗಿ ವಿಷ ಬಿತ್ತಲು ಮಣಿಪುರಕ್ಕೆ ಬಂದಿದ್ದಾರೆ. ಈ ಸಂಗತಿ ನನಗೆ ಮೊದಲೇ ಗೊತ್ತಾಗಿದ್ದರೆ ರಾಜ್ಯ ಪ್ರವೇಶಕ್ಕೆ ಅವರಿಗೆ ಅವಕಾಶ ನೀಡುತ್ತಿರಲಿಲ್ಲ' ಎಂದರು.
'ಕೆಲವು ಮಾಧ್ಯಮಗಳು ಏಕಪಕ್ಷೀಯ ವರದಿ ಪ್ರಕಟಿಸಿವೆ. ಸರ್ಕಾರದ ನಿಲುವು ಪಕ್ಷಪಾತಿಯಾಗಿದೆ. ಇಡೀ ರಾಜ್ಯವನ್ನು ಪ್ರತಿನಿಧಿಸಬೇಕಾದ ಸರ್ಕಾರವು ಪ್ರಜಾಸತ್ತಾತ್ಮಕವಾಗಿ ಕರ್ತವ್ಯ ನಿರ್ವಹಿಸುವಲ್ಲಿ ಸೋತಿದೆ' ಎಂದು ವರದಿಯಲ್ಲಿ ಹೇಳಲಾಗಿದೆ.
'ನೀವು ಏನನ್ನಾದರೂ ಮಾಡಬೇಕಿದ್ದರೆ ಸ್ಥಳಕ್ಕೆ ಬಂದು ನೈಜ ಸ್ಥಿತಿಯನ್ನು ಅವಲೋಕಿಸಬೇಕು. ಎಲ್ಲಾ ಸಮುದಾಯದ ಪ್ರತಿನಿಧಿಗಳು ಮತ್ತು ಸಂತ್ರಸ್ತೆಯನ್ನು ಭೇಟಿ ಮಾಡಿ ನೀವು ಕಂಡ ಸತ್ಯವನ್ನು ವರದಿ ಮಾಡಬೇಕು. ಕೇವಲ ಒಂದು ವರ್ಗದ ಜನರನ್ನು ಭೇಟಿ ಮಾಡಿ ತೀರ್ಮಾನಕ್ಕೆ ಬರುವುದು ಸರಿಯಲ್ಲ. ಇದು ಅಪಚಾರ ಹಾಗೂ ಖಂಡನಾರ್ಹ ವರದಿಯಾಗಲಿದೆ' ಎಂದು ಹೇಳಿದ್ದಾರೆ.