ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ನಡುವೆ ನವದೆಹಲಿಯಲ್ಲಿ ಶುಕ್ರವಾರ ರಾತ್ರಿ ನಡೆದ ದ್ವಿಪಕ್ಷೀಯ ಸಭೆಯಲ್ಲಿ, ಉಭಯ ದೇಶಗಳ ರಕ್ಷಣಾ ಸಹಕಾರ ಯೋಜನೆಗಳ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ.
ಸುಸ್ಥಿರ ಅಭಿವೃದ್ಧಿ, ಬಹುಪಕ್ಷೀಯ ಸಹಕಾರವನ್ನು ಹೆಚ್ಚಿಸುವುದು ಮತ್ತು ಜಾಗತಿಕ ಸವಾಲುಗಳನ್ನು ಎದುರಿಸಲು ಆರ್ಥಿಕ ನೀತಿಗಳ ಬಗ್ಗೆ ಸಹಮತದೊಂದಿಗೆ ಮುನ್ನಡೆಯುವ ಕುರಿತು ಮೋದಿ ಮತ್ತು ಜೋ ಬೈಡನ್ ವಿಶ್ವಾಸ ವ್ಯಕ್ತಪಡಿಸಿದರು.
ಉಭಯ ನಾಯಕರ ಜೊತೆ 50 ನಿಮಿಷಗಳ ಮಾತುಕತೆ ನಡೆಯಿತು. ರಕ್ಷಣಾ ಪಾಲುದಾರಿಕೆಯನ್ನು ಮತ್ತಷ್ಟು ಸದೃಢಗೊಳಿಸಲು ಇಬ್ಬರೂ ಸಮ್ಮತಿಸಿದರು. ಡ್ರೋನ್‌ಗಳು ಮತ್ತು ಜೆಟ್ ಎಂಜಿನ್‌ಗಳ ನಿರ್ಮಾಣ ಯೋಜನೆಯನ್ನು ಜಂಟಿಯಾಗಿ ಅಭಿವೃದ್ಧಿಪಡಿಸುವ ಕ್ರಮಕ್ಕೆ ಸಹಮತ ವ್ಯಕ್ತಪಡಿಸಿದರು.
ಪರಮಾಣು ಕ್ಷೇತ್ರದಲ್ಲಿ ಸಹಕಾರ, 6ಜಿ ಮತ್ತು ಕೃತಕ ಬುದ್ಧಿಮತ್ತೆಯಂತಹ ನಿರ್ಣಾಯಕ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳು ಹಾಗೂ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‌ಗಳನ್ನು ಮರುರೂಪಿಸುವ ಮಾರ್ಗಗಳ ಕುರಿತು ಉಭಯ ನಾಯಕರು ಚರ್ಚೆ ನಡೆಸಿದರು.
ವಾಷಿಂಗ್ಟನ್‌ನಲ್ಲಿ ಕಳೆದ ಜೂನ್ 22ರಂದು ಈ ನಾಯಕರು ಭೇಟಿಯಾಗಿದ್ದಾಗ ಒಪ್ಪಿಕೊಂಡಿದ್ದ ರಕ್ಷಣಾ ಸಹಾಯಕ ಯೋಜನೆಗಳನ್ನು ಮುಂದುವರಿಸಲು ಭಾರತ ಮತ್ತು ಅಮೆರಿಕ ಬದ್ಧತೆ ತೋರಿವೆ.
ಬೆಂಗಳೂರಿನಲ್ಲಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಮತ್ತು ಅಮೆರಿಕದ ಸಿನ್ಸಿನಾಟಿಯ ಜಿ.ಇ ಏರೋಸ್ಪೇಸ್ ಎಫ್-414 ಫೈಟರ್ ಜೆಟ್ ಎಂಜಿನ್‌ಗಳನ್ನು ತಯಾರಿಸುವ ಕುರಿತ ವಾಣಿಜ್ಯ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಯಿತು ಎಂದು ದ್ವಿಪಕ್ಷೀಯ ಸಭೆಯ ಬಳಿಕ ಬಿಡುಗಡೆಯಾದ ಉಭಯ ದೇಶಗಳ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಮಾನವ ಹಕ್ಕುಗಳು, ಬಹುತ್ವ ಮತ್ತು ಎಲ್ಲಾ ನಾಗರಿಕರಿಗೆ ಸಮಾನ ಅವಕಾಶಗಳ ಹಂಚಿಕೆಯ ಮೌಲ್ಯಗಳು ನಮ್ಮ ದೇಶಗಳು ಅನುಭವಿಸುವ ಯಶಸ್ಸಿಗೆ ನಿರ್ಣಾಯಕವಾಗಿವೆ. ಈ ಮೌಲ್ಯಗಳು ನಮ್ಮ ಸಂಬಂಧವನ್ನು ಬಲಪಡಿಸುತ್ತವೆ ಎಂದು ಉಭಯ ನಾಯಕರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.