ನವದೆಹಲಿ: ರಾಷ್ಟ್ರ ರಾಜಧಾನಿಯ ಪ್ರಗತಿ ಮೈದಾನದಲ್ಲಿ ಸೆ. 9 ಹಾಗೂ 10ರಂದು ನಡೆಯಲಿರುವ ಜಿ20 ಶೃಂಗದಲ್ಲಿ ಸ್ಥಾಪಿಸಲಾಗಿರುವ ಭಾರತ್ ಮಂಡಪಮ್‌ನಲ್ಲಿ 'ಪ್ರಜಾಪ್ರಭುತ್ವದ ತಾಯಿ' ಎಂಬ ವಸ್ತುಪ್ರದರ್ಶನಕ್ಕೆ ಭೇಟಿ ನೀಡಲಿರುವ ವಿಶ್ವದ ಪ್ರಮುಖ ರಾಷ್ಟ್ರಗಳ ನಾಯಕರು ಹಾಗೂ ಮುಖಂಡರನ್ನು 'ಅವತಾರ್' ಎಂಬ ಕೃತಕ ಬುದ್ಧಿಮತ್ತೆಯ ಸಾಧನ ಸ್ವಾಗತಿಸಲಿದೆ.
ವೇದದ ಕಾಲದಿಂದ ಆಧುನಿಕ ಕಾಲದವರೆಗೆ ಭಾರತದಲ್ಲಿ ಸಾಗಿ ಬಂದ ಪ್ರಜಾಪ್ರಭುತ್ವ ಸಂಪ್ರದಾಯಗಳ ಕುರಿತು ಈ ವಸ್ತುಪ್ರದರ್ಶನದಲ್ಲಿ ಮಾಹಿತಿ ಸಿಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಂಗ್ಲಿಷ್, ಫ್ರೆಂಚ್, ಮ್ಯಾಂಡರಿನ್, ಇಟಾಲಿ, ಕೊರಿಯಾ ಹಾಗೂ ಜಾಪನೀಸ್ ಸೇರಿದಂತೆ 16 ಪ್ರಮುಖ ಭಾಷೆಗಳಲ್ಲಿ ಲಿಖಿತ ಹಾಗೂ ಧ್ವನಿ ಮೂಲಕ ಮಾಹಿತಿ ಲಭ್ಯ . ಜತೆಗೆ ಭಾರತದ ಪ್ರಜಾಪ್ರಭುತ್ವದ ಇತಿಹಾಸವನ್ನು ತಿಳಿಸುವ ಮತ್ತು ಮರು ವ್ಯಾಖ್ಯಾನಿಸುವ 26 ಸಂವಹನ ಮಾದರಿಯ ಪರದೆ ಮೂಲಕ ವಿಷಯ ಬಿತ್ತರಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
'ವಸ್ತುಪ್ರದರ್ಶನ ಕೇಂದ್ರದ ಮುಂಭಾಗದಲ್ಲಿ ಜಿ20 ಶೃಂಗದಲ್ಲಿ ಪಾಲ್ಗೊಳ್ಳಲಿರುವ ವಿವಿಧ ರಾಷ್ಟ್ರಗಳ ನಾಯಕರನ್ನು ಸ್ವಾಗತಿಸಲಿರುವ 'ಅವತಾರ್', ಅಲ್ಲಿ ಸಿಗಲಿರುವ ಮಾಹಿತಿ ಕುರಿತು ವಿವರಣೆ ನೀಡಲಿದೆ. ಹರಪ್ಪ ಬಾಲಕಿಯ ಮೂಲ ಕಲಾಕೃತಿಯ ಪ್ರತಿಕೃತಿ ಇಡಲಾಗಿದೆ. ಇದನ್ನು 360 ಡಿಗ್ರಿ ಕೋನದಲ್ಲಿ ತಿರುಗುವ ವೇದಿಕೆಯ ಮೇಲೆ ನಿಲ್ಲಿಸಲಾಗಿದೆ. ಇದು ಪ್ರದರ್ಶನಾಲಯದ ಮಧ್ಯಭಾಗದಲ್ಲಿ ಇಡಲಾಗಿದೆ. ಬಾಲಕಿಯ ಮೂಲ ಕಲಾಕೃತಿ 10.5 ಸೆಂ.ಮೀ. ಎತ್ತರ ಮಾತ್ರ ಇದೆ. ಅದರ 5 ಅಡಿ ಎತ್ತರ ಹಾಗೂ 120 ಕೆ.ಜಿ.ಯ ಕಂಚಿನ ಪ್ರತಿಮೆಯನ್ನು ಸಿದ್ಧಪಡಿಸಲಾಗಿದೆ' ಎಂದು ಮಾಹಿತಿ ನೀಡಿದ್ದಾರೆ.
ಭಾರತದ ಸ್ವಾತಂತ್ರ್ಯ ನಂತರದಲ್ಲಿ ನಡೆದ ಚುನಾವಣೆಯ ಪರಂಪರೆಯ ಮೇಲೆ ಈ ವಸ್ತು ಪ್ರದರ್ಶನ ಬೆಳಕು ಚೆಲ್ಲಲಿದೆ. 1951-52ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಿಂದ ಹಿಡಿದು 2019ರ ಲೋಕಸಭಾ ಚುನಾವಣೆವರೆಗೂ ಇಲ್ಲಿ ಮಾಹಿತಿ ಸಿಗಲಿದೆ.