ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಸ್ತಾವಿಸಲಾಗಿರುವ, ಕೋರ್ಸ್‌ಗಳಿಗೆ ಪ್ರವೇಶ ಹಾಗೂ ಕೋರ್ಸ್‌ಗಳಿಂದ ನಿರ್ಗಮನದ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಇರುವ ಬಹುಬಗೆಯ ಆಯ್ಕೆ ಪದ್ಧತಿಯ (ಎಂಇಎಂಇ - ಮಲ್ಟಿ ಎಂಟ್ರಿ ಮಲ್ಟಿ ಎಕ್ಸಿಟ್) ಅನುಷ್ಠಾನದಲ್ಲಿ ಭಾರತದ ಶಿಕ್ಷಣ ಸಂಸ್ಥೆಗಳು ಹಲವು ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇದೆ ಎಂದು ಸಂಸತ್ತಿನ ಸ್ಥಾಯಿ ಸಮಿತಿಯೊಂದು ಹೇಳಿದೆ.
ಶಿಕ್ಷಣ, ಮಹಿಳೆಯರು, ಮಕ್ಕಳು, ಯುವಕರು ಮತ್ತು ಕ್ರೀಡೆಗೆ ಸಂಬಂಧಿಸಿದ ಸಂಸತ್ತಿನ ಈ ಸ್ಥಾಯಿ ಸಮಿತಿಗೆ ಬಿಜೆಪಿ ಸಂಸದ ವಿವೇಕ್ ಠಾಕೂರ್ ಅಧ್ಯಕ್ಷರಾಗಿದ್ದಾರೆ. ಸಮಿತಿಯ ವರದಿಯನ್ನು ರಾಜ್ಯಸಭೆಯಲ್ಲಿ ಈಚೆಗೆ ಮಂಡಿಸಲಾಗಿದೆ.
'ಈ ವ್ಯವಸ್ಥೆಯನ್ನು ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ರೂಪಿಸಿರುವಂತೆ ಕಾಣುತ್ತದೆ. ಇದನ್ನು ಪಾಶ್ಚಾತ್ಯ ದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳು ಬಹಳ ಪರಿಣಾಮಕಾರಿಯಾಗಿ ಬಳಸಿಕೊಂಡಿವೆ' ಎಂದು ಸಮಿತಿಯ ವರದಿಯು ಉಲ್ಲೇಖಿಸಿದೆ.
ಆದರೆ, ಭಾರತದಲ್ಲಿ ಜನಸಂಖ್ಯೆ ಹೆಚ್ಚಿರುವ ಕಾರಣ, ಪ್ರತಿ ವರ್ಷ ಕೋರ್ಸ್‌ಗೆ ಸೇರ್ಪಡೆ ಆಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುತ್ತದೆ. ಎಂಇಎಂಇ ವ್ಯವಸ್ಥೆಯನ್ನು ಶಿಕ್ಷಣ ಸಂಸ್ಥೆಗಳು ಜಾರಿಗೆ ತಂದಲ್ಲಿ, ಪ್ರತಿ ವರ್ಷ ಎಷ್ಟು ವಿದ್ಯಾರ್ಥಿಗಳು ಕೋರ್ಸ್‌ನಿಂದ ಹೊರನಡೆಯುತ್ತಾರೆ ಹಾಗೂ ಎಷ್ಟು ಮಂದಿ ಕೋರ್ಸ್‌ನ ನಡುವಿನಲ್ಲಿ ಬಂದು ಸೇರಿಕೊಳ್ಳುತ್ತಾರೆ ಎಂಬುದನ್ನು ಅಂದಾಜಿಸುವುದು ಬಹಳ ಕಷ್ಟವಾಗುತ್ತದೆ ಎಂದು ವರದಿಯು ವಿವರಿಸಿದೆ.
ಕೋರ್ಸ್ ತೊರೆಯುವ ಹಾಗೂ ಕೋರ್ಸ್‌ಗೆ ಮಧ್ಯದಲ್ಲಿ ಬಂದು ಸೇರಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಶಿಕ್ಷಣ ಸಂಸ್ಥೆಗಳಿಗೆ ಗೊತ್ತಿರುವುದಿಲ್ಲ. ಈ ಕಾರಣದಿಂದ, ವಿದ್ಯಾರ್ಥಿ-ಬೋಧಕ ಅನುಪಾತದಲ್ಲಿ ಖಂಡಿತವಾಗಿಯೂ ವ್ಯತ್ಯಾಸ ಉಂಟಾಗುತ್ತದೆ. ದೇಶದಲ್ಲಿ ಭೌಗೋಳಿಕವಾಗಿ ಉನ್ನತ ಶಿಕ್ಷಣ ಸಂಸ್ಥೆಗಳು ಸಮಾನ ಸಂಖ್ಯೆಯಲ್ಲಿ ಇಲ್ಲ. ಇದು ಕೂಡ ಹಲವು ಪ್ರದೇಶಗಳಲ್ಲಿ, ಅದರಲ್ಲೂ ಮುಖ್ಯವಾಗಿ ನಗರ ಪ್ರದೇಶಗಳ ಹೊರಗೆ, ಎಂಇಎಂಇ ವ್ಯವಸ್ಥೆಯನ್ನು ನಿರ್ವಹಿಸುವುದು ಕಷ್ಟಕರ ಆಗುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ವಿದ್ಯಾರ್ಥಿಗಳು ಶಿಕ್ಷಣವನ್ನು ಮಧ್ಯದಲ್ಲಿಯೇ ತೊರೆಯುವುದನ್ನು ತಗ್ಗಿಸುವುದು ಎಂಇಎಂಇ ವ್ಯವಸ್ಥೆಯ ಉದ್ದೇಶ ಎಂದು ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ಸಿದ್ಧಪಡಿಸಿರುವ ಮಾರ್ಗಸೂಚಿ ಕೈಪಿಡಿಯೊಂದರಲ್ಲಿ ಹೇಳಲಾಗಿದೆ.