ನವದೆಹಲಿ: ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿನ ಭಾರತದ ರಾಯಭಾರ ಕಚೇರಿ ಮೇಲೆ ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ದಾಳಿ ಎಸಗಿದ 10 ಆರೋಪಿಗಳ ಚಿತ್ರಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಬಿಡುಗಡೆ ಮಾಡಿದೆ.
ಜತೆಗೆ ಈ ಆರೋಪಿಗಳ ಕುರಿತು ಮಾಹಿತಿ ಒದಗಿಸುವಂತೆ ಸಾರ್ವಜನಿಕರಲ್ಲಿ ಕೋರಿದ್ದು, ಇವರ ಕುರಿತು ಮಾಹಿತಿ ನೀಡಿದವರ ಗುರುತನ್ನು ಬಹಿರಂಗಪಡಿಸುವುದಿಲ್ಲ ಎಂದು ತಿಳಿಸಿದೆ.
ಈ ಹತ್ತು ಆರೋಪಿಗಳ ಕುರಿತು ಮೂರು ಪ್ರತ್ಯೇಕ ನೋಟಿಸ್‌ಗಳನ್ನು ಹೊರಡಿಸಿದೆ.
ಮೊದಲ ನೋಟಿಸ್‌ನಲ್ಲಿ ಈ ಆರೋಪಿಗಳ ಬಂಧನಕ್ಕೆ ಪೂರಕವಾಗಬಹುದಾದ ಅವರ ಗುರುತು ಮತ್ತು ಮುಖ್ಯವಾದ ಮಾಹಿತಿ ನೀಡುವಂತೆ, ಎರಡನೇ ನೋಟಿಸ್‌ನಲ್ಲಿ ಇಬ್ಬರು ಆರೋಪಿಗಳ ಚಿತ್ರಗಳು ಮತ್ತು ಮೂರನೇ ನೋಟಿಸ್‌ನಲ್ಲಿ ಇತರೆ ಆರು ಆರೋಪಿಗಳ ಚಿತ್ರಗಳನ್ನು ಪ್ರಕಟಿಸಲಾಗಿದೆ. ಜತೆಗೆ ಇವರ ಮಾಹಿತಿ ಒದಗಿಸುವವರ ಮಾಹಿತಿಯನ್ನು ಗೋಪ್ಯವಾಗಿಡಲಾಗುವುದು ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಮಾರ್ಚ್ 18 ಮತ್ತು 19ರ ಮಧ್ಯರಾತ್ರಿ ಕೆಲವು ಖಾಲಿಸ್ತಾನಿ ಪರವಾದ ಉಗ್ರರು ಸ್ಯಾನ್‌ಫ್ರಾನ್ಸಿಸ್ಕೊದಲ್ಲಿರುವ ಭಾರತದ ರಾಯಭಾರ ಕಚೇರಿಗೆ ಅತಿಕ್ರಮವಾಗಿ ಪ್ರವೇಶಿಸಿ, ಕಚೇರಿಯನ್ನು ಸುಟ್ಟುಹಾಕಲು ಯತ್ನಿಸಿದ್ದರು. ಅದೇ ದಿನ ಖಾಲಿಸ್ತಾನ ಬೆಂಬಲಿಗರು ಘೋಷಣೆಗಳನ್ನು ಕೂಗುತ್ತಾ, ಭದ್ರತಾ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿ ರಾಯಭಾರ ಕಚೇರಿ ಆವರಣದಲ್ಲಿ ಖಾಲಿಸ್ತಾನದ ಎರಡು ಧ್ವಜಗಳನ್ನು ಹಾರಿಸಿದ್ದರು. ಜತೆಗೆ ಕಟ್ಟಡವನ್ನು ಧ್ವಂಸಗೊಳಿಸಿ, ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದರು ಎಂದು ತನಿಖಾ ಸಂಸ್ಥೆ ಹೇಳಿದೆ.
ಈ ಕುರಿತು ಎನ್‌ಐಎ, ಜೂನ್ 16ರಂದು ಭಾರತೀಯ ದಂಡ ಸಂಹಿತೆ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಮತ್ತು ಸಾರ್ವಜನಿಕರ ಆಸ್ತಿಗೆ ಹಾನಿ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದೆ.
ಅಲ್ಲದೆ, ಜುಲೈ ಒಂದು ಮತ್ತು ಎರಡರಂದು ಮಧ್ಯರಾತ್ರಿ ಕೆಲವು ಆರೋಪಿಗಳು ರಾಯಭಾರ ಕಚೇರಿಗೆ ನುಗ್ಗಿ ಅಧಿಕಾರಿಗಳು ಇದ್ದಾಗಲೇ ಕಚೇರಿಗೆ ಬೆಂಕಿ ಹಚ್ಚಲು ಯತ್ನಿಸಿದ್ದರು.