ಉಪ್ಪಳ: ಗಡಿ ಗ್ರಾಮ ವ್ಯಾಪ್ತಿಯ ಗುಡ್ಡಗಾಡು ಪ್ರದೇಶವಾದ ಪೊಸಡಿಗುಂಪೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 1.11 ಕೋಟಿ ಮಂಜೂರಾಗಿದೆ. ಪೊಸಡಿಗುಂಪೆಯು ಸಮುದ್ರ ಮಟ್ಟದಿಂದ 1060 ಅಡಿ ಎತ್ತರದಲ್ಲಿರುವ ಪರ್ವತ ಶ್ರೇಣಿಯಾಗಿದೆ. ಜಿಲ್ಲೆಯ ಪೈವಳಿಕೆ ಗ್ರಾಮದಲ್ಲಿದ್ದು, ಇಲ್ಲಿಂದ ಅರಬ್ಬಿ ಸಮುದ್ರ, ಮಂಗಳೂರು ಮತ್ತು ಕುದುರೆಮುಖವನ್ನು ಮನೋಹರ ವೀಕ್ಷಣೆಯ ಮೂಲಕ ನೋಡಬಹುದು. ಇದು ಚಾರಣಿಗರಿಗೂ ಅಚ್ಚುಮೆಚ್ಚಿನ ಸ್ಥಳವಾಗಿದೆ.
ಕಪ್ಪು ಬಂಡೆಗಳ ನಡುವಿನ ಹಸಿರು ಕಣಿವೆಗಳು, ಪ್ರಾಚೀನ ಗುಹೆಗಳು ನೋಡುಗರನ್ನು ಆಕರ್ಷಿಸುತ್ತವೆ. ಸಣ್ಣ ಪೊದೆಗಳು ಮತ್ತು ಕಾಡು ಹೂವಿನ ಗಿಡಗಳಿಂದ ನೋಡುಗರನ್ನು ಬೆರಗುಗೊಳಿಸುತ್ತದೆ. ಕಾಸರಗೋಡು-ದಕ್ಷಿಣ ಕನ್ನಡದೊಂದಿಗೆ ಗಡಿ ಹಂಚಿಕೊಂಡಿರುವ ಈ ಸ್ಥಳವನ್ನು ಉತ್ತಮ ಪ್ರವಾಸಿ ಕ್ಷೇತ್ರವನ್ನಾಗಿ ಮಾಡಲು ಪ್ರವಾಸೋದ್ಯಮ ಇಲಾಖೆ ತಡವಾಗಿಯಾದರೂ ಇದೀಗ ಪ್ರಯತ್ನ ಆರಂಭಿಸಿದೆ.
ಮಳೆಗಾಲದಲ್ಲಿ ಇಲ್ಲಿ ಅನೇಕ ಜಲಪಾತಗಳನ್ನು ಕಾಣಬಹುದು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನ ಭಾಗವಾಗಿ ಗಿರಿಧಾಮ ಸೇರಿದಂತೆ ಪೊಸಡಿಗುಂಪೆಯ ಮೂಲಸೌಕರ್ಯಕ್ಕೆ ಹಣ ಮಂಜೂರು ಮಾಡಲಾಗಿತ್ತು. ಜಿಲ್ಲಾ ಪ್ರವಾಸೋದ್ಯಮ ಉತ್ತೇಜನಾ ಮಂಡಳಿ (ಡಿಟಿಪಿಸಿ) ಜಿಲ್ಲಾ ನಿರ್ಮಿತಿ ಕೇಂದ್ರದ ಮೂಲಕ ವಿವರವಾದ ಯೋಜನಾ ದಾಖಲೆಯನ್ನು ಸಿದ್ಧಪಡಿಸಿದೆ.
ಯೋಜನೆಯಲ್ಲಿ ಪ್ರವೇಶ ದ್ವಾರ, ಮಾಹಿತಿ ಕಿಯೋಸ್ಕ್, ಕೆಫೆ, ಕ್ಲೋಕ್‍ರೂಮ್, ವಾಶ್‍ರೂಮ್‍ಗಳು ಮತ್ತು ವ್ಯೂ ಟವರ್(ವೀಕ್ಷಣಾ ಗೋಪುರ) ಒಳಗೊಂಡಿದೆ. ಡಿಟಿಪಿಸಿ ಸಲ್ಲಿಸಿದ 1.11 ಕೋಟಿ ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ವಿಧಾನಸಭೆಯಲ್ಲಿ ಶಾಸಕ ಎ.ಕೆ.ಎಂ.ಅಶ್ರಫ್ ಅವರ ಪ್ರಶ್ನೆಗೆ ಸಚಿವ ಪಿ.ಎ.ಮುಹಮ್ಮದ್ ರಿಯಾಝ್ ನೀಡಿದ ಉತ್ತರದಲ್ಲಿ ಈ ಮಾಹಿತಿ ನೀಡಲಾಗಿದೆ.
ಅಭಿಮತ: ತಾಂತ್ರಿಕ ಅನುಮತಿಯನ್ನು ಪೂರ್ಣಗೊಳಿಸಿ, ತಕ್ಷಣವೇ ಕಾಮಗಾರಿ ಆರಂಭಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ಬೆಟ್ಟದ ತುದಿಗೆ ಉತ್ತಮ ರಸ್ತೆ ಸೌಕರ್ಯ ಕಲ್ಪಿಸಲು ವಿಶೇಷವಾಗಿ ಸೂಚಿಸಲಾಗಿದೆ.
-ಎ.ಕೆ.ಎಂ.ಅಶ್ರಫ್
ಶಾಸಕರು. ಮಂಜೇಶ್ವರ ವಿಧಾನಸಭಾ ಕ್ಷೇತ್ರ