ಮುಂಬೈ: ಭವಿಷ್ಯ ನಿಧಿ ಮೊತ್ತ ಸುಮಾರು ₹ 11 ಕೋಟಿ ಬರಲಿದೆ ಎಂಬ ಸೈಬರ್ ವಂಚಕರ ಮಾತು ನಂಬಿದ 71 ವರ್ಷದ, ಖಾಸಗಿ ಕಂಪನಿಯೊಂದರ ನಿವೃತ್ತ ಉದ್ಯೋಗಿಯೊಬ್ಬರ ಕುಟುಂಬ ₹ 4.35 ಕೋಟಿ ಕಳೆದುಕೊಂಡಿದೆ.
ವಂಚನೆಗೆ ಒಳಗಾದ ನಿವೃತ್ತ ಉದ್ಯೋಗಿಯು ಗುರುವಾರ ಇಲ್ಲಿನ ಕಫೆ ಪರೇಡ್ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ನೀಡಿದ್ದಾರೆ.
ಆ ಪ್ರಕಾರ, ಪ್ರಾದೇಶಿಕ ಭವಿಷ್ಯ ನಿಧಿ ಸಂಸ್ಥೆಯ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದ ಮಹಿಳೆಯೊಬ್ಬರು ಮೇ ತಿಂಗಳಲ್ಲಿ ದೂರುದಾರ ವ್ಯಕ್ತಿಯ ಪತ್ನಿಗೆ ಕರೆ ಮಾಡಿದ್ದರು. ಪತ್ನಿಯ ವಿಶ್ವಾಸಗಳಿಸಲು ಅವರ ಪತಿಗೆ ಸಂಬಂಧಿಸಿದ್ದ ವೈಯಕ್ತಿಕ ವಿವರಗಳನ್ನು ತಿಳಿಸಿದ್ದರು.
ಮಹಿಳೆಗೆ ಮತ್ತೆ ಕರೆ ಮಾಡಿ, 'ನಿಮ್ಮ ಪತಿ ಕೆಲಸ ಮಾಡುತ್ತಿದ್ದ ಐ.ಟಿ ಕಂಪನಿಯು ಅವರ ಇಪಿಎಫ್ ಖಾತೆಯಲ್ಲಿ ಹೆಸರಿನಲ್ಲಿ ₹ 4 ಲಕ್ಷ ಠೇವಣಿ ಇಟ್ಟಿತ್ತು. ಅದರ ಅವಧಿಯು ಈಗ ಮುಗಿದಿದ್ದು, ₹ 11 ಕೋಟಿ ಸಿಗಲಿದೆ' ಎಂದು ತಿಳಿಸಿದ್ದಾರೆ.
ಆದರೆ, ವ್ಯಕ್ತಿ ತನ್ನ ಸೇವಾ ನಿವೃತ್ತಿಯ ಬಳಿಕ ಭವಿಷ್ಯ ನಿಧಿ ಖಾತೆಯ ಮೊತ್ತವನ್ನು ಹಿಂಪಡೆದಿದ್ದರು.
ದೂರುದಾರನ ಪತ್ನಿಗೆ ಕರೆ ಮಾಡಿದ್ದ ಸೈಬರ್ ವಂಚಕಿಯು, ಹಣ ಬಿಡುಗಡೆಗಾಗಿ ಟಿಡಿಎಸ್, ಜಿಎಸ್‌ಟಿ ಮತ್ತು ಆದಾಯ ತೆರಿಗೆಗಾಗಿ ಹಣ ವರ್ಗಾಯಿಸಲು ಸೂಚಿಸಿದ್ದಾರೆ. ನಿಜವೆಂದು ನಂಬಿದ್ದ ಮಹಿಳೆ ಹಂತ, ಹಂತವಾಗಿ ಒಟ್ಟಾರೆ ₹ 4.35 ಕೋಟಿ ವರ್ಗಾಯಿಸಿದ್ದಾರೆ.
ಮತ್ತಷ್ಟು ಹಣ ವರ್ಗಾಯಿಸಲು ಸೂಚಿಸಿದಾಗ, ದೂರುದಾರನ ಪತ್ನಿ ನಮ್ಮ ಬಳಿ ಹಣವಿಲ್ಲ ಎಂದು ಉತ್ತರಿಸಿದ್ದಾರೆ. ಆಗ, ಸೈಬರ್ ವಂಚಕಿಯು ಈ ಬಗ್ಗೆ ಐ.ಟಿ. ಇಲಾಖೆಗೆ ದೂರು ನೀಡಲಾಗುವುದು ಎಂದು ಬೆದರಿಸಿದ್ದಾಳೆ.
ಈ ಹಂತದಲ್ಲಿ ನಿವೃತ್ತ ಉದ್ಯೋಗಿ ಮತ್ತು ಅವರ ಪತ್ನಿಗೆ ತಾವು ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ. ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಸಿಆರ್‌ಪಿಸಿಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.