ನವದೆಹಲಿ: ಮದುವೆ ಸ್ವರ್ಗದಲ್ಲಿಯೇ ನಡೆದಿರುತ್ತದೆ ಅಂತಾ ಹೇಳುತ್ತಾರೆ ಆದರೆ ದುರದೃಷ್ಟವಶಾತ್ ಅನೇಕ ದಂಪತಿಗಳು ನರಕದ ಮೂಲಕ ಹೋಗುತ್ತಾರೆ. ವರುಣ್ ಗೋಪಾಲ್ ಮತ್ತು ಶಿಲ್ಪಿ ಶ್ರೀವಾತ್ಸವ್ ದಂಪತಿಯ ಅಂತಹ ಒಂದು ಪ್ರಕರಣದಲ್ಲಿ ಪತ್ನಿಯ ಪರವಾಗಿ ನ್ಯಾಯಾಲಯ ತೀರ್ಪು ಬಂದಿದೆ. ಈ ಪ್ರಕರಣದಲ್ಲಿ ವರುಣ್‌ನ ತಂದೆಗೆ ಸೇರಿದ ಕಟ್ಟಡ ಸಂಕೀರ್ಣದಲ್ಲಿರುವ ಆರು ಅಂಗಡಿಗಳನ್ನು ಮಾರಾಟ ಮಾಡಿ ಆ ಹಣವನ್ನು ಪತ್ನಿ ಶಿಲ್ಪಿಗೆ ಜೀವನಾಂಶ ನೀಡಲು ನಿಗದಿತ ಠೇವಣಿ ಇಡುವಂತೆ ದೆಹಲಿ ಹೈಕೋರ್ಟ್‌ನ ರಿಜಿಸ್ಟ್ರಾರ್‌ಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಏನಿದು ಪ್ರಕರಣ: ಸುಮಾರು ಎಂಟು ವರ್ಷಗಳ ಹಿಂದೆ ತನ್ನಿಂದ ಬೇರ್ಪಟ್ಟ ತನ್ನ ಪತಿಯಿಂದ ಸುಮಾರು 1.25 ಕೋಟಿ ರೂಪಾಯಿ ಬಾಕಿ ನೀಡುವಂತೆ ಕೋರಿ ಛತ್ತೀಸ್‌ಗಢ ಮೂಲದ ಶಿಲ್ಪಿ ಶ್ರೀವಾಸ್ತವ ನ್ಯಾಯಾಲಯದ ಮೊರೆ ಹೋದ ನಂತರ ಈ ತೀರ್ಪು ಬಂದಿದೆ. ಆ ದೇಶದಲ್ಲಿ ಎಕ್ಸ್ ಪಾರ್ಟಿ ವಿಚ್ಛೇದನ (ಒಬ್ಬರ ಅನುಪಸ್ಥಿತಿಯಲ್ಲಿ ನ್ಯಾಯಾಲಯದಿಂದ ನಿರ್ಧಾರ ಮಾಡಲಾಗಿದೆ ಎಂದರ್ಥ) ಪಡೆದ ನಂತರ ವರುಣ್ ಆಸ್ಟ್ರೇಲಿಯಾದಲ್ಲಿ ಮತ್ತೆ ವಿವಾಹವಾಗಿದ್ದು, ಎರಡನೇ ಮದುವೆಯಿಂದ ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ಬೇರ್ಪಟ್ಟ ಎರಡು ವರ್ಷಗಳ ನಂತರ ಬಿಲಾಸ್‌ಪುರದ ಕೌಟುಂಬಿಕ ನ್ಯಾಯಾಲಯದಿಂದ ಜೀವನ ನಿರ್ವಹಣೆಗೆ ಪತಿಯಿಂದ ಮಾಸಿಕ 1 ಲಕ್ಷ ರೂ. ಪಡೆದುಕೊಳ್ಳಲು ಮಹಿಳೆ ಯಶಸ್ವಿಯಾಗಿದ್ದಾಳೆ. ನಂತರ ಆಕೆ ತನ್ನ ಪತಿ ಮತ್ತು ಆತನ ಕುಟುಂಬದ ವಿರುದ್ಧ ವಂಚನೆಗೆ ಸಂಬಂಧಿಸಿದ ಕ್ರಿಮಿನಲ್ ಮೊಕದ್ದಮೆ ಹಾಕಿ ವರುಣ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ಪ್ರೇರೇಪಿಸಿದ್ದಾಳೆ. ಪತಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದಾಗ ಭಾರತದಲ್ಲಿ ಜೀವನ ನಿರ್ವಹಣೆ ಪಾವತಿ ಕುರಿತ ವಿಚಾರಣೆಗೆ ಹಾಜರಾಗಲು ನಿರಾಕರಿಸಿದ್ದಾರೆ.
ಆದಾಗ್ಯೂ ಶಿಲ್ಪಾ ಆರಂಭಿಸಿದ ಕ್ರಿಮಿನಲ್ ಮೊಕದ್ದಮೆಗೆ ಸಂಬಂಧಿಸಿದಂತೆವರುಣ್ ಅವರ ತಂದೆ ಮೋಹನ್ ಗೋಪಾಲ್ ಅವರನ್ನು ಬಂಧಿಸಿದ್ದು 2018-19ರಲ್ಲಿ ಅವರು ಹತ್ತು ತಿಂಗಳ ಕಾಲ ಜೈಲುವಾಸ ಅನುಭವಿಸಿದ್ದಾರೆ. ಮುಂದಿನ ವರ್ಷ, ವರುಣ್ ತಿಂಗಳಿಗೆ 4.25 ಲಕ್ಷ ರೂ. ಗಳಿಸುತ್ತಿದ್ದು ಅದರಲ್ಲಿ ಶೇ. 30 ರಷ್ಟು ಪಡೆಯಲು ತನಗೆ ಅರ್ಹತೆ ಎಂದು ವಾದಿಸಿ, ಜೀವನ ನಿರ್ವಹಣೆ ಮೊತ್ತವನ್ನು 1.27 ಲಕ್ಷಕ್ಕೆ ಹೆಚ್ಚಿಸಲು ಛತ್ತೀಸ್‌ಗಢ ಹೈಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ. ಅರ್ಜಿದಾರನೊಂದಿಗೆ (ಪತಿ) ವಾಸಿಸುತ್ತಿದ್ದಾಗ ತನ್ನ ಸ್ಥಾನಮಾನಕ್ಕೆ ತಿಂಗಳಿಗೆ ರೂ. 1 ಲಕ್ಷ ರೂ. ಪಡೆಯುವುದು ಸರಿಹೊಂದುವುದಿಲ್ಲ ಎಂದು ವಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪತ್ನಿಗೆ ತಿಂಗಳಿಗೆ 1.27 ಲಕ್ಷ ರೂ. ಜೀವನಾಂಶ ಮತ್ತು ಬಾಕಿ ಹಣ ಸಿಗದೇ ಇದ್ದಾಗ ಪ್ರಕರಣ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ,. ಮಾವ ಒಡೆತನದ ಹಲವಾರು ಅಂಗಡಿಗಳನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಪತ್ನಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದು, ಅದರಿಂದ ಬರುವ ಬಾಡಿಗೆಯಿಂದ ತಾನು ಬದುಕಬಹುದು ಎಂದು ವಾದಿಸಿದ್ದಾಳೆ.
ವಿಚಾರಣೆಯ ಸಮಯದಲ್ಲಿ ತನ್ನ ಮಗನ ಹೆಂಡತಿಗೆ ಜೀವನಾಂಶವನ್ನು ಪಾವತಿಸಲು ಜವಾಬ್ದಾರನಲ್ಲ ಎಂದು ಮಾವ ವಾದಿಸಿದ್ದಾರೆ. ಆದರೆ. ಅವರ ವಾದವನ್ನು ಒಪ್ಪದ ನ್ಯಾಯಾಲಯ,ವರುಣ್‌ನ ತಂದೆಗೆ ಸೇರಿದ ಕಟ್ಟಡ ಸಂಕೀರ್ಣದಲ್ಲಿರುವ ಆರು ಅಂಗಡಿಗಳನ್ನು ಮಾರಾಟ ಮಾಡಿ ಆ ಹಣವನ್ನು ಪತ್ನಿ ಶಿಲ್ಪಿಗೆ ಜೀವನಾಂಶ ನೀಡಲು ನಿಗದಿತ ಠೇವಣಿ ಇಡುವಂತೆ ದೆಹಲಿ ಹೈಕೋರ್ಟ್‌ನ ರಿಜಿಸ್ಟ್ರಾರ್‌ಗೆ ನಿರ್ದೇಶನ ನೀಡಿದೆ.