ನವದೆಹಲಿ: ಪತ್ನಿಯ ಜೀವನನಿರ್ವಹಣೆ ವೆಚ್ಚವನ್ನೂ ಭರಿಸದೇ ಕಡೆಗಣಿಸಿ ವಿದೇಶಕ್ಕೆ ತೆರಳಿದ್ದ ಪ್ರಕರಣದಲ್ಲಿ ವ್ಯಕ್ತಿಯ ಪಿತ್ರಾರ್ಜಿತ ಆಸ್ತಿಯನ್ನು ಮಾರಿ, ಪತ್ನಿಗೆ ಬಾಕಿ ಉಳಿದಿರುವ ₹ 1.25 ಕೋಟಿ ಮೊತ್ತವನ್ನು ಭರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್ (ಈಗ ನಿವೃತ್ತರಾಗಿದ್ದಾರೆ) ಮತ್ತು ಅರವಿಂದ ಕುಮಾರ್ ಅವರಿದ್ದ ಪೀಠವು ಇತ್ತೀಚೆಗೆ ಈ ಸಂಬಂಧ ಆದೇಶವನ್ನು ನೀಡಿದೆ.
ಈ ಪ್ರಕರಣದಲ್ಲಿ ಆರೋಪಿತ ವ್ಯಕ್ತಿ ಪತ್ನಿಯನ್ನು ಬಿಟ್ಟು ಆಸ್ಟ್ರೇಲಿಯಾಗೆ ತೆರಳಿದ್ದರು. ಅಲ್ಲದೆ, ಅಲ್ಲಿನ ಕೋರ್ಟ್ ಮೂಲಕ ವಿಚ್ಛೇದನ ಪಡೆದು ಮತ್ತೊಬ್ಬರನ್ನು ವಿವಾಹವಾಗಿದ್ದ. ಆ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇತ್ತ, ಮಹಿಳೆಯು ಪರಿಹಾರಕ್ಕಾಗಿ ಪತಿ, ಮೈದುನರ ಜೊತೆಗೆ ಕಾನೂನು ಹೋರಾಟ ನಡೆಸಿದ್ದರು. ಆದರೆ, ಮೈದುನರು ಪರಿಹಾರ ನೀಡುವುದಕ್ಕೆ ಬದಲಾಗಿ ಜೈಲಿಗೇ ಹೋಗಲು ಸಜ್ಜಾಗಿದ್ದರು.
ಈ ಪ್ರಕರಣದ ಹಿನ್ನೆಲೆಯನ್ನು ಪರಾಮರ್ಶಿಸಿದ ಪೀಠವು, ಆರೋಪಿ ವರುಣ್ ಗೋಪಾಲ್ ಅವರು ಅತಿಯಾದ ಮೊಂಡುತನ ಪ್ರದರ್ಶಿಸಿ, ಪತ್ನಿಯನ್ನು ಕಡೆಗಣಿಸಿ ವಿದೇಶಕ್ಕೆ ಹೋಗಿದ್ದಾರೆ ಎಂದು ಅಭಿಪ್ರಾಯಪಟ್ಟಿತು. ವರುಣ್ ಮತ್ತು ಆತನ ತಂದೆ ಮೋಹನ್ ಗೋಪಾಲ್ ಅವರು ಒಂದಲ್ಲ, ಒಂದು ನೆಪವೊಡ್ಡಿ ಕೋರ್ಟ್ ಆದೇಶ ಜಾರಿಯಾಗದಂತೆ ನೋಡಿಕೊಂಡಿದ್ದರು ಎಂದೂ ಪೀಠ ಗಮನಿಸಿತು.
ಈ ಹಿನ್ನೆಲೆಯಲ್ಲಿ ಆರೋಪಿಯ ಪಿತ್ರಾರ್ಜಿತ ಆಸ್ತಿ, ಮುಖ್ಯವಾಗಿ ಆರು ಮಳಿಗೆಗಳನ್ನು ಮಾರಾಟ ಮಾಡಬೇಕು ಹಾಗೂ ಸುಪ್ರೀಂ ಕೋರ್ಟ್‌ಆ ದೇಶ ಜಾರಿಗೊಳಿಸಬೇಕು ಎಂದು ದೆಹಲಿ ಹೈಕೋರ್ಟ್‌ನ ರಿಜಿಸ್ಟ್ರಾರ್ ಅವರಿಗೆ ಆದೇಶಿಸಿತು.
ಮಳಿಗೆ ಮಾರಾಟದಿಂದ ಬಂದ ಮೊತ್ತವನ್ನು ಆರು ತಿಂಗಳ ಅವಧಿಗೆ ನಿಶ್ಚಿತ ಠೇವಣಿ ಇಡಬೇಕು. ಬಡ್ಡಿಯನ್ನು ಅರ್ಜಿದಾರರಿಗೆ ವಿತರಿಸಬೇಕು. ಒಂದು ವೇಳೆ ಜಪ್ತಿ ಮಾಡಿ ಆಸ್ತಿ ಮಾರಾಟವಾಗದಿದ್ದರೆ, ಅದು ಅರ್ಜಿದಾರರ ಪರವಾಗಿರುತ್ತದೆ ಎಂದು ಪೀಠವು ಆದೇಶಿಸಿತು.
ಪ್ರಕರಣದ ಹಿನ್ನೆಲೆ: ಅರ್ಜಿದಾರ ಮಹಿಳೆ ಮತ್ತು ವರುಣ್ ವಿವಾಹ 2012-13ರಲ್ಲಿ ಜರುಗಿತ್ತು. ನಂತರ ವರುಣ್‌ಗೆ ಆಸ್ಟ್ರೇಲಿಯಾದಲ್ಲಿ ಕೆಲಸ ಸಿಕ್ಕಿತ್ತು. ಎರಡು ತಿಂಗಳಲ್ಲಿಯೇ ವೈವಾಹಿಕ ಸಂಬಂಧ ಹದಗೆಟ್ಟು, ಕೋರ್ಟ್ ಮೆಟ್ಟಿಲೇರಿತ್ತು. ನಿರೀಕ್ಷಣಾ ಜಾಮೀನು ಕೋರಿ ಅರ್ಜಿಸಲ್ಲಿಸಿದ್ದ ವರುಣ್, ಕ್ರಿಮಿನಲ್ ಮೊಕದ್ದಮೆ ಹಾಗೂ ನಿರ್ವಹಣೆಗೆ ಸಂಬಂಧಿಸಿದ ಮೊಕದ್ದಮೆಗಳ ವಿಚಾರಣೆಗೂ ಹಾಜರಾಗಿರಲಿಲ್ಲ.
ವರುಣ್ ಆಸ್ಟೇಲಿಯಾದಲ್ಲೇ ನೆಲೆಯೂರಿದ್ದು, ಅಲ್ಲಿನ ಕೋರ್ಟ್ ಮೂಲಕ 2017ರ ಡಿಸೆಂಬರ್ 21ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಅದರ ರದ್ದತಿ ಕೋರಿ ಪತ್ನಿ 2021ರ ನವೆಂಬರ್ 8ರಂದು ಅರ್ಜಿ ಸಲ್ಲಿಸಿದ್ದರು. ಇಲ್ಲಿ ಪತ್ನಿ ತನ್ನ ವಿಧವಾ ತಾಯಿ ಜೊತೆ ನೆಲೆಸಿದ್ದು, ನಿರ್ವಹಣಾ ವೆಚ್ಚ ಭರಿಸಬೇಕು ಎಂದು ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ್ದ ಕೆಳಹಂತದ ಕೋರ್ಟ್ ಪತ್ನಿಗೆ ಮಾಸಿಕ 1.27 ಲಕ್ಷ ಪಾವತಿಸಲು ಎಂದು 2021ರ ಏಪ್ರಿಲ್‌ನಲ್ಲಿ ಆದೇಶಿಸಿತ್ತು.
ಈಗ ಪ್ರಕರಣ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದೆ. ಕೆಳಹಂತದ ಕೋರ್ಟ್ ಆದೇಶಿಸಿದ್ದಂತೆ ನಿರ್ವಹಣಾ ವೆಚ್ಚದ ಬಾಕಿಯೇ ಈಗ ₹ 1.25 ಕೋಟಿಯಷ್ಟಾಗಿದೆ ಎಂದು ಪತ್ನಿ ವಾದಿಸಿದ್ದರು.