ಕಾಸರಗೋಡು: ಕೇಂದ್ರ ಭೂಸಾರಿಗೆ-ಹೆದ್ದಾರಿ ಅಭಿವೃದ್ಧಿ ಖಾತೆ ಸಚಿವ ನಿತಿನ್ ಗಡ್ಕರಿ ಅ. 12ರಂದು ಕಾಸರಗೋಡಿಗೆ ಭೇಟಿ ನೀಡಲಿದ್ದಾರೆ. ಕಾಸರಗೋಡು ಅಡ್ಕತ್ತಬೈಲಿನ ತಾಳಿಪಡ್ಪು ಮೈದಾನದಲ್ಲಿ ಸಮಾರಂಭ ನಡೆಯಲಿದೆ.
ಈ ಸಂದರ್ಭ ಕೇಂದ್ರ ಸರ್ಕಾರ ಕೇರಳಕ್ಕೆ ಮಂಜೂರುಗೊಳಿಸಲಿರುವ ಎರಡು ಬೃಹತ್ ಯೋಜನೆಗಳ ಬಗ್ಗೆ ಘೋಷಣೆ ಇದೇ ವೇದಿಕೆಯಲ್ಲಿ ನಡೆಯಲಿರುವುದಾಗಿ ಸೂಚನೆಯಿದೆ. ಕೇಂದ್ರ ಹಾಗೂ ರಾಜ್ಯದ ಬಿಜೆಪಿಯ ಹಿರಿಯ ಮುಖಂಡರೂ ಪಾಲ್ಗೊಳ್ಳಲಿದ್ದಾರೆ. ಲೋಕಸಭಾ ಚುನಾವಣೆ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೇರಳಕ್ಕೆ ಕೇಂದ್ರ ಎರಡು ಬೃಹತ್ ಯೋಜನೆಗಳುನ್ನು ಮಂಜೂರುಗೊಳಿಸುತ್ತಿರುವುದೂ ಕುತೂಹಲಕ್ಕೆ ಕಾರಣವಾಗಿದೆ.
ತಲಪ್ಪಾಡಿಯಿಂದ ನೀಲೇಶ್ವರ ವರೆಗೆ ರಾಷ್ಟ್ರೀಯ ಹೆದ್ದಾರಿ ಷಟ್ಪಥ ಕಾಮಗಾರಿ ಭರದಿಂದ ಸಾಗುತ್ತಿದ್ದು, ತಲಪ್ಪಾಡಿಯಿಂದ ಚೆರ್ಕಳ ವರೆಗೆ ಒಂದನೇ ರೀಚ್ ಹಾಗೂ ಅಲ್ಲಿಂದ ಮುಂದೆ ನೀಲೇಶ್ವರ ವರೆಗೆ ಎರಡನೇ ರೀಚ್‍ನ ಕಾಮಗಾರಿ ಭರದಿಂದ ಸಾಗುತ್ತಿದೆ.
ಇದೇ ಸಂದರ್ಭ ಸಚಿವ ನಿತಿನ್ ಗಡ್ಕರಿ ಅವರು ಮೂನಾರ್‍ನಲ್ಲಿ ನಡೆಯಲಿರುವ ಇದೇರೀತಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಳಿದ್ದು, ಅಲ್ಲಿಯೂ ಅಭಿವೃದ್ಧಿ ಯೋಜನೆಗಳ ಘೋಷಣೆ ನಡೆಸಲಿದ್ದಾರೆ.