ನವದೆಹಲಿ: ವಿದ್ಯುತ್ ದರ ಹೆಚ್ಚಳದ ಮೂಲಕ ಅದಾನಿ ಸಮೂಹವು ಜನಸಾಮಾನ್ಯರಿಂದ ₹12 ಸಾವಿರ ಕೋಟಿ ಸುಲಿಗೆ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಇಲ್ಲಿ ಆರೋಪಿಸಿದರು.
ಇಂಡೊನೇಷ್ಯಾದಿಂದ ಆಮದು ಮಾಡಿಕೊಂಡ ಕಲ್ಲಿದ್ದಲಿಗೆ ಹೆಚ್ಚಿನ ದರ ಪಾವತಿಸಲಾಗಿದೆ ಎಂದು ತೋರಿಸಿ, ಅದಾನಿ ಸಮೂಹವು ಜನರ ಜೇಬಿನಿಂದ ಹಣವನ್ನು 'ನೇರವಾಗಿ' ಪಡೆದುಕೊಳ್ಳುತ್ತಿದೆ ಎಂದು ರಾಹುಲ್ ದೂರಿದರು.
ಜನರಿಗಾಗುವ ಈ ಹೊರೆ ತಪ್ಪಿಸಲು ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವು ವಿದ್ಯುತ್ತನ್ನು 200 ಯೂನಿಟ್‌ವರೆಗೆ ಉಚಿತವಾಗಿ ನೀಡುತ್ತಿದೆ. ಮಧ್ಯಪ್ರದೇಶದಲ್ಲೂ ಇಂಥದ್ದೇ ಭರವಸೆ ನೀಡಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಆದರೆ ಈ ಆರೋಪಗಳನ್ನು ಅದಾನಿ ಸಮೂಹವು ಅಲ್ಲಗಳೆದಿದೆ.
'ಫೈನ್ಯಾನ್ಶಿಯಲ್ ಟೈಮ್ಸ್'ನಲ್ಲಿ ಈ ಕುರಿತು ಈಚೆಗೆ ಪ್ರಕಟವಾಗಿರುವ ವರದಿಯೊಂದನ್ನು ಪ್ರಸ್ತಾಪಿಸಿದ ರಾಹುಲ್, 'ಈ ವಿಷಯದ ಬಗ್ಗೆ ಪ್ರಧಾನಿ ಮೋದಿ ಅವರು ಮೌನವಾಗಿರುವುದು ಏಕೆ' ಎಂದು ಕೇಳಿದರು.
'ಅದಾನಿ ಸಮೂಹ ಇಂಡೊನೇಷ್ಯಾ ದಲ್ಲಿ ಕಲ್ಲಿದ್ದಲು ಖರೀದಿಸಿತು. ಆದರೆ, ಇದು ಭಾರತಕ್ಕೆ ಬರುವ ವೇಳೆಗೆ ದರ ದುಪ್ಪಟ್ಟಾಯಿತು. ಭಾರತದ ಬಡ ಜನರ ಜೇಬಿನಿಂದ ಇವರು ₹12,000 ಕೋಟಿ ಎತ್ತಿದ್ದಾರೆ. ನಮ್ಮ ವಿದ್ಯುತ್ ದರ ಏರುತ್ತಲೇ ಇದೆ' ಎಂದರು.
'ಇದನ್ನು ಲೆಕ್ಕಕ್ಕೆ ತೆಗೆದುಕೊಂಡರೆ, ಅದಾನಿ ಸಮೂಹವು ಲೂಟಿ ಮಾಡಿದ ಹಣದ ಮೊತ್ತವು ₹32,000 ಕೋಟಿಗೆ ತಲುಪಿದೆ. ಮುಂದಿನ ದಿನಗಳಲ್ಲಿ, ಲೂಟಿಯ ಮೊತ್ತವು ಇನ್ನಷ್ಟು ಹೆಚ್ಚಲಿದೆ' ಎಂದು ಹೇಳಿದರು.
'ನಾವು ಕರ್ನಾಟಕದಲ್ಲಿ ವಿದ್ಯುತ್‌ಗೆ ಸಬ್ಸಿಡಿ ನೀಡುತ್ತಿದ್ದೇವೆ, ಮಧ್ಯಪ್ರದೇಶದಲ್ಲಿ ಸಬ್ಸಿಡಿ ನೀಡಲಿ ದ್ದೇವೆ. ಆದರೆ, ಇದೇ ವೇಳೆ ಅದಾನಿ ಸಮೂಹವು ಕಲ್ಲಿದ್ದಲಿನ ಬಿಲ್ ಹೆಚ್ಚಳದ ನೆಪದಲ್ಲಿ ದೇಶದ ಜನರಿಂದ ನೇರವಾಗಿ ಹಣ ಕದಿಯುತ್ತಿದೆ. ಪ್ರಧಾನಿ ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ' ಎಂದರು.
'ಶರದ್ ಪವಾರ್ ಅವರು ಗೌತಮ್ ಅದಾನಿ ಜೊತೆ ಹೊಂದಿರುವ ಉತ್ತಮ ಸಂಬಂಧದ ಬಗ್ಗೆ ಪ್ರಶ್ನಿಸಿದ್ದೀರಾ' ಎಂದು ಕೇಳಿದಾಗ, 'ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಈ ದೇಶದ ಪ್ರಧಾನಿ ಅಲ್ಲ. ಅವರು ಈ ಉದ್ಯಮಿಯನ್ನು ರಕ್ಷಿಸುತ್ತಿಲ್ಲ' ಎಂದು ಪ್ರತಿಕ್ರಿಯಿಸಿದರು.
ಪ್ರಧಾನಿ ಅವರಿಂದ ರಕ್ಷಣೆ ಇಲ್ಲದೆ ಇದು ನಡೆಯಲು ಸಾಧ್ಯವಿಲ್ಲ. ಈ ಸಂಭಾವಿತ ವ್ಯಕ್ತಿಯ (ಅದಾನಿ) ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬುದು ಈಗಿರುವ ಪ್ರಶ್ನೆ.'ಮೋದಿ ಅವರು (ಅದಾನಿ ಅವರನ್ನು) ರಕ್ಷಿಸುತ್ತಿದ್ದಾರೆ. ಆದ್ದ ರಿಂದಲೇ ನಾನು ಮೋದಿ ಅವರನ್ನು ಪ್ರಶ್ನಿಸುತ್ತೇನೆಯೇ ಹೊರತು ಶರದ್ ಪವಾರ್ ಅವರನ್ನಲ್ಲ. ಒಂದು ವೇಳೆ, ಪವಾರ್ ಅವರು ಭಾರತದ ಪ್ರಧಾನಿಯಾ ಗಿದ್ದು, ಅದಾನಿ ಅವರನ್ನು ರಕ್ಷಿಸುತ್ತಿದ್ದರೆ ಆಗ ನಾನು ಪವಾರ್ ಅವರಿಗೂ ಈ ಪ್ರಶ್ನೆ ಕೇಳುತ್ತಿದ್ದೆ'.
-ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
'ಫೈನಾನ್ಶಿಯಲ್ ಟೈಮ್ಸ್‌ನಲ್ಲಿ ಬಂದಿರುವ ವರದಿಯು ಯಾವುದೇ ಸರ್ಕಾರವನ್ನು ಉರುಳಿಸುವಷ್ಟು ದೊಡ್ಡ ಸುದ್ದಿ. ಪ್ರಧಾನಿ ಅವರಿಂದ ಮತ್ತೆ, ಮತ್ತೆ, ಮತ್ತೆ ರಕ್ಷಿಸಲ್ಪಡುತ್ತಿರುವ ವ್ಯಕ್ತಿಯೊಬ್ಬ ನೇರವಾಗಿ ಕಳ್ಳತನ ನಡೆಸಿದ ಸುದ್ದಿ ಇದು. ಯಾವುದೇ ಮಾಧ್ಯಮದವರು ಈ ಸುದ್ದಿಯನ್ನು ಕೈಗೆತ್ತಿಕೊಳ್ಳಲು ಆಸಕ್ತಿ ತೋರದಿರುವುದು ಅಚ್ಚರಿ' ಎಂದರು.
'ದಾಖಲೆಗಳು ಸಿಗುತ್ತಿಲ್ಲ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಹೇಳುತ್ತಿದೆ. ಆದರೆ ಪತ್ರಿಕೆಯೊಂದಕ್ಕೆ ದಾಖಲೆಗಳೂ ಸಿಕ್ಕಿವೆ. ಅದಾನಿ ಸಮೂಹವು ಪ್ರಧಾನಿ ಅವರಿಂದ ರಕ್ಷಣೆ ಪಡೆಯುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ' ಎಂದು ಆರೋಪಿಸಿದರು.
ವಿದ್ಯುತ್‌ಗೆ ಸಬ್ಸಿಡಿ ನೀಡುತ್ತಿರುವ ಕಾಂಗ್ರೆಸ್ ಆಡಳಿತವಿರುವ ರಾಜ್ಯ ಸರ್ಕಾರಗಳು ಅದಾನಿ ಸಮೂಹದ ವಿರುದ್ಧ ತನಿಖೆಗೆ ಮುಂದಾಗುತ್ತವೆಯೇ ಎಂದು ಪ್ರಶ್ನಿಸಿದಾಗ, ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಗಾಂಧಿ ಕುಟುಂಬದ ವಿರುದ್ಧ ಬಿಜೆಪಿ ಆರೋಪ
ರಾಹುಲ್ ಆರೋಪಕ್ಕೆ ಪ್ರತಿಯಾಗಿ ಬಿಜೆಪಿಯು ಗಾಂಧಿ ಕುಟುಂಬದ ವಿರುದ್ಧ ಭ್ರಷ್ಟಾಚಾರ ಆಪಾದನೆ ಮಾಡಿದೆ.
ಉದ್ಯಮ ಸಮೂಹವನ್ನು ಒಳಗೊಂಡ ವಿಷಯವು ಸುಪ್ರೀಂಕೋರ್ಟ್ ಮುಂದಿದೆ. ಸಂವಿಧಾನದಲ್ಲಿ ಅಥವಾ ಸುಪ್ರೀಂಕೋರ್ಟ್‌ನಲ್ಲಿ ರಾಹುಲ್ ಗಾಂಧಿಗೆ ನಂಬಿಕೆ ಇಲ್ಲ ಎಂಬುದನ್ನು ಅವರ ಹೇಳಿಕೆಗಳು ಸೂಚಿಸುತ್ತವೆ ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಪ್ರತಿಕ್ರಿಯಿಸಿದ್ದಾರೆ.
ವಿಶ್ವದಲ್ಲೇ ಗಾಂಧಿ ಕುಟುಂಬ ಅತ್ಯಂತ ಭ್ರಷ್ಟ ಕುಟುಂಬ ಎಂದು ಆರೋಪಿಸಿದ ಅವರು, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸ್ವತಃ ರಾಹುಲ್ ಅವರೇ ಜಾಮೀನು ಪಡೆದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು. ತಮ್ಮ ಮತ್ತು ರಾಬರ್ಟ್ ವಾದ್ರಾ ವಿರುದ್ಧದ ಭ್ರಷ್ಟಾಚಾರ ಆರೋಪದ ಬಗ್ಗೆ ಅವರು ಎಂದೂ ಮಾತನಾಡುವುದಿಲ್ಲ ಎಂದರು.