HEALTH TIPS

12 ವರ್ಷದ ಬಳಿಕ ಚಪ್ಪಲಿ ಧರಿಸಿದ ರೈತ: ಇದಕ್ಕೆ ಸಾಕ್ಷಿಯಾಯ್ತು ಮೋದಿಯ ಘೋಷಣೆ!

              ಹೈದಾರಾಬಾದ್: ತೆಲಂಗಾಣದಲ್ಲಿ ಅರಿಶಿನ ಮಂಡಳಿ ಸ್ಥಾಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ ಬೆನ್ನಲ್ಲೇ 71 ವರ್ಷದ ರೈತರೊಬ್ಬರು ಸುಮಾರು 12 ವರ್ಷಗಳ ಬಳಿಕ ಕಾಲಿಗೆ ಚಪ್ಪಲಿ ಧರಿಸಿದ್ದಾರೆ.

                ಉತ್ತಮ ಬೆಲೆಯಿಲ್ಲದೆ ಅರಿಶಿನ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬೆಂಬಲ ಬೆಲೆ ಪಡೆಯಲು ರಾಜ್ಯದಲ್ಲಿ ಮಂಡಳಿ ಸ್ಥಾಪಿಸಬೇಕು ಎಂದು ನಿಜಾಮಾಬಾದ್ ಜಿಲ್ಲೆಯ ಮೋರ್ತಾಡ್ ಮಂಡಲದ ಪಾಲೆಂ ಗ್ರಾಮದ ರೈತ ಮುತ್ಯಾಲ ಮನೋಹರರೆಡ್ಡಿ ಆಗ್ರಹಿಸಿದ್ದರು.

              ರಾಜ್ಯದಲ್ಲಿ ಅರಿಶಿನ ಮಂಡಳಿ ಸ್ಥಾಪನೆ ಮಾಡಬೇಕೆಂಬ ಉದ್ದೇಶದಿಂದ ಮನೋಹರರೆಡ್ಡಿ ಅವರು 2011ರ ನವೆಂಬರ್ 4ರಿಂದ ಚಪ್ಪಲಿ ಧರಿಸದಿರಲು ನಿರ್ಧರಿಸಿದ್ದರು. ಬಳಿಕ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ.

              ಭಾನುವಾರ ಪ್ರಧಾನಿ ಮೋದಿಯವರು ಅರಿಶಿನ ಮಂಡಳಿ ಸ್ಥಾಪನೆ ಮಾಡುವುದಾಗಿ ಘೋಷಿಸಿದ ಬಳಿಕ ಮನೋಹರ್ ರೆಡ್ಡಿ ಅವರು ನಿಜಾಮಾಬಾದ್ ಕೃಷಿ ಮಾರುಕಟ್ಟೆ ಕಚೇರಿಯಲ್ಲಿ ಚಪ್ಪಲಿ ಧರಿಸಿದ್ದಾರೆ. ಈ ವೇಳೆ ಬಹುದಿನಗಳ ಅವರ ಕನಸು ನನಸಾಗಿದ್ದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

              ಮೋದಿ ಹೇಳಿದ್ದೇನು: ಮೋದಿ ಅವರು ತೆಲಂಗಾಣಕ್ಕೆ ಭಾನುವಾರ ಭೇಟಿ ನೀಡಿದ್ದು, ₹13,545 ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.

              ತೆಲಂಗಾಣದಲ್ಲಿ ರಾಷ್ಟ್ರೀಯ ಅರಿಶಿನ ಮಂಡಳಿ ಮತ್ತು ಮುಲುಗು ಜಿಲ್ಲೆಯಲ್ಲಿ ಸಮ್ಮಕ್ಕ- ಸಾರಕ್ಕ ಹೆಸರಿನಲ್ಲಿ ಕೇಂದ್ರೀಯ ಗಿರಿಜನರ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಪ್ರಧಾನಿ ಮೋದಿ ಪ್ರಕಟಿಸಿದ್ದಾರೆ.

                ಈ ವಿಶ್ವವಿದ್ಯಾಲಯವು ₹900 ಕೋಟಿ ವೆಚ್ಚದಲ್ಲಿ ತಲೆ ಎತ್ತಲಿದೆ ಎಂದು ಮೋದಿ ಹೇಳಿದ್ದಾರೆ.

               ತಂಬಾಕು ಮಾದರಿಯಲ್ಲೇ ಅರಿಶಿನ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು ಎಂಬುದು ತೆಲಂಗಾಣ ರೈತರ ದೀರ್ಘಕಾಲದ ಬೇಡಿಕೆ. ರಾಜ್ಯದಲ್ಲಿ ವಿಶೇಷವಾಗಿ ನಿಜಾಮಾಬಾದ್‌ ಜಿಲ್ಲೆಯಲ್ಲಿ ಕನಿಷ್ಠ 50 ಸಾವಿರ ಎಕರೆಯಲ್ಲಿ ಅರಿಶಿನ ಬೆಳೆಯಲಾಗುತ್ತದೆ.

                  ಭಾರತದಿಂದ ರಫ್ತಾಗುವ ಒಟ್ಟು ಅರಿಶಿನದಲ್ಲಿ ಕನಿಷ್ಠ ಶೇ 30ರಷ್ಟು ಇಲ್ಲಿಂದಲೇ ಪೂರೈಕೆಯಾಗುತ್ತದೆ. ದರ ಏರಿಳಿತ ಮತ್ತು ಇತರ ಸಂಕಷ್ಟಗಳ ಮಧ್ಯೆ ಅರಿಶಿನ ಬೆಳೆವ ರೈತರು ಸಮರ್ಪಕ ಮಾರುಕಟ್ಟೆಗಾಗಿ ಮಂಡಳಿಯನ್ನು ಸ್ಥಾಪಿಸಬೇಕೆಂದು ಒತ್ತಾಯಿಸುತ್ತಿದ್ದರು.

               2019ರಲ್ಲಿ ನಿಜಾಮಾಬಾದ್‌ನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಧರ್ಮಪುರಿ ಅರವಿಂದ್‌ ಅವರು ಅರಿಶಿನ ಮಂಡಳಿ ಸ್ಥಾಪಿಸುವ ಭರವಸೆ ನೀಡಿದ್ದರು. ಆದರೆ, ಅವರ ಗೆಲುವಿನ ಬಳಿಕ ಇದು ಸಾಧ್ಯವಾಗದ್ದಕ್ಕೆ ರೈತರು ಇತರ ರಾಜಕೀಯ ಪಕ್ಷಗಳ ಬೆಂಬಲದೊಂದಿಗೆ ಪ್ರತಿಭಟನೆ ನಡೆಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries