ಚೆನ್ನೈ: ತಮಿಳುನಾಡಿಗೆ ಸೇರಿದ ಸುಮಾರು 12 ಮೀನುಗಾರರನ್ನು ಮಾಲ್ಡೀವ್ಸ್ ಕೋಸ್ಟ್ ಗಾರ್ಡ್ ಬಂಧಿಸಿದ್ದು, ಅವರ ಮತ್ತು ಅವರ ದೋಣಿ ಬಿಡುಗಡೆಗೆ ಕ್ರಮಕೈಗೊಳ್ಳಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಶನಿವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರ ಬರೆದಿರುವ ಸ್ಟಾಲಿನ್, ಅಕ್ಟೋಬರ್ 1 ರಂದು ತೂತುಕುಡಿ ಜಿಲ್ಲೆಯಿಂದ ಯಾಂತ್ರೀಕೃತ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರನ್ನು ಮಾಲ್ಡೀವ್ಸ್ ಕೋಸ್ಟ್ ಗಾರ್ಡ್ ಅಕ್ಟೋಬರ್ 23 ರಂದು ತಿನಾಧೂ ದ್ವೀಪದ ಬಳಿ ಬಂಧಿಸಿದೆ ಎಂದು ತಿಳಿಸಿದ್ದಾರೆ.
'ಬಂಧಿತ ಮೀನುಗಾರರನ್ನು ಮತ್ತು ಅವರ ದೋಣಿಯನ್ನು ಶೀಘ್ರವಾಗಿ ಬಿಡುಗಡೆ ಮಾಡಲು ರಾಜತಾಂತ್ರಿಕ ಮಾರ್ಗಗಳ ಮೂಲಕ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ನಾನು ನಿಮ್ಮನ್ನು ವಿನಂತಿಸುತ್ತೇನೆ' ಎಂದು ತಮಿಳುನಾಡು ಮುಖ್ಯಮಂತ್ರಿ ಪತ್ರದ ಮೂಲಕ ಮನವಿ ಮಾಡಿದ್ದಾರೆ.