ನವದೆಹಲಿ: 2023-24ರ ಆರ್ಥಿಕ ವರ್ಷದಲ್ಲಿ ಸುಮಾರು 1.36 ಲಕ್ಷ ಕೋಟಿ ರೂಪಾಯಿ ತೆರಿಗೆ ವಂಚನೆಯನ್ನು ಆರ್ಥಿಕ ಇಲಾಖೆ ಪತ್ತೆ ಮಾಡಿದೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ. ವಂಚನೆ ಪತ್ತೆಯಾದ ಬಳಿಕ ಸ್ವಯಂ ಪ್ರೇರಿತವಾಗಿ 14,108 ಕೋಟಿ ತೆರಿಗೆ ಪಾವತಿಸಿದ್ದಾರೆ ಎಂದು ತಿಳಿದು ಬಂದಿದೆ.
ಏಪ್ರಿಲ್ 2020 ರಿಂದ ಸೆಪ್ಟೆಂಬರ್ 2023 ರವರೆಗೆ 57,000 ಕೋಟಿ ರು. ಜಿಎಸ್ ಟಿ ವಂಚನೆಯಾಗಿದ್ದು, ಜಿಎಸ್‌ಟಿ ಗುಪ್ತಚರ ಮಹಾನಿರ್ದೇಶಕರು ಇದುವರೆಗೆ 6,000 ಕ್ಕೂ ಹೆಚ್ಚು ನಕಲಿ ಐಟಿಸಿ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ.
ಹಣಕಾಸು ಸಚಿವಾಲಯದ ಪ್ರಕಾರ, ಜೂನ್ 2023 ರಿಂದ ಡಿಜಿಜಿಐ ಮಾಸ್ಟರ್‌ಮೈಂಡ್‌ಗಳನ್ನು ಗುರುತಿಸಲು ಮತ್ತು ಬಂಧಿಸುವತ್ತ ಕಾರ್ಯ ನಿರ್ವಹಿಸುತ್ತವೆ. ದೇಶಾದ್ಯಂತ ಇಂತ ಸಿಂಡಿಕೇಟ್ ಗಳು ವ್ಯಾಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಇಲಾಖೆಯು ಸುಧಾರಿತ ತಾಂತ್ರಿಕ ಪರಿಕರಗಳ ಸಹಾಯದಿಂದ ದತ್ತಾಂಶ ವಿಶ್ಲೇಷಣೆಯನ್ನು ಬಳಸುತ್ತಿದ್ದು, ಬೃಹತ್ ಪ್ರಮಾಣದ ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚುತ್ತಿದೆ ಎಂದು ತಿಳಿಸಿದೆ.
ಈ ಸಿಂಡಿಕೇಟ್‌ಗಳು ಸಾಮಾನ್ಯವಾಗಿ ತೆರಿಗೆ ವಂಚಕರನ್ನು ಬಳಸಿಕೊಳ್ಳುತ್ತವೆ. ಅವರಿಗೆ ಕಮಿಷನ್‌ಗಳು, ಬ್ಯಾಂಕ್ ಸಾಲ ಸೇರಿದಂತೆ ಹಲವು ರೀತಿಯಲ್ಲಿ ಆಮೀಷ ಒಡ್ಡುತ್ತಾರೆ. ನಂತರ ಅವರ ಕೆವೈಸಿ ದಾಖಲೆಗಳನ್ನು ಅವರ ಗಮನಕ್ಕೆ ಬಾರದಂತೆ ಬಳಸಿಕೊಂಡು ನಕಲಿ ಕಂಪನಿಗಳನ್ನು ಸೃಷ್ಟಿಸುತ್ತಾರೆ.
ಇನ್ನೂ ಕೆಲವು ಸಂದರ್ಭಗಳಲ್ಲಿ, KYC ಗಳನ್ನು ಸಂಬಂಧಿತ ವ್ಯಕ್ತಿಯ ಗಮನಕ್ಕೆ ತಂದು ಅವರಿಗೆ ಸಣ್ಣ ಹಣ ಪಾವತಿಸುವ ಮೂಲಕ ಬಳಸಿಕೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.