ಗ್ಯಾಂಗ್ಟಕ್: ಉತ್ತರ ಸಿಕ್ಕಿಂನ ತೀಸ್ತಾ ನದಿ ಜಲಾನಯನ ಪ್ರದೇಶದಲ್ಲಿ ಹಠಾತ್ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿದೆ. ಕಾಣೆಯಾಗಿರುವ 22 ಸೇನಾ ಸಿಬ್ಬಂದಿ ಸೇರಿದಂತೆ 102 ಮಂದಿ ಇನ್ನೂ ಪತ್ತೆಯಾಗಿಲ್ಲ.
ನೀರ್ಗಲ್ಲು ಸರೋವರದಲ್ಲಿ ಉಂಟಾದ ಪ್ರವಾಹದಿಂದ ತೀಸ್ತಾ ನದಿ ಉಕ್ಕಿ ಹರಿಯುತ್ತಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿವೆ.
ಪ್ರವಾಹ ಪೀಡಿತ ನಾಲ್ಕು ಜಿಲ್ಲೆಗಳಲ್ಲಿ ಸರ್ಕಾರ 26 ಕಾಳಜಿ ಕೇಂದ್ರಗಳನ್ನು ತೆರೆದಿದೆ. ಗ್ಯಾಂಗ್ಟಕ್ ಜಿಲ್ಲೆಯ ಎಂಟು ಕೇಂದ್ರಗಳಲ್ಲಿ ಒಟ್ಟು 1,025 ಜನರು ಆಶ್ರಯ ಪಡೆದಿದ್ದಾರೆ. ಆದರೆ, ಇತರೆ 18 ಕೇಂದ್ರಗಳಲ್ಲಿ ಸಂತ್ರಸ್ತರ ಸಂಖ್ಯೆ ತಕ್ಷಣಕ್ಕೆ ಲಭ್ಯವಾಗಿಲ್ಲ.
ಪ್ರವಾಹದಿಂದ ತೀವ್ರ ಬಾಧಿತವಾಗಿರುವ ಸಿಂಗ್‌ತಮ್ ಪ್ರದೇಶಕ್ಕೆ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಂಗ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಳಿಕ ತಮಂಗ್ ಅವರು ಸಿಂಗ್‌ತಮ್ ಸಮುದಾಯ ಕೇಂದ್ರದಲ್ಲಿ ಅಧಿಕಾರಿಗಳ ಜತೆ ತುರ್ತು ಸಭೆ ನಡೆಸಿದರು.
'ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲಾ ಸಹಾಯ ಮತ್ತು ಪರಿಹಾರ ಒದಗಿಸಲು ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ. ನಾಗರಿಕರ ಸುರಕ್ಷತೆ ಮತ್ತು ಯೋಗಕ್ಷೇಮ ಖಚಿತಪಡಿಸಿಕೊಳ್ಳಲು ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಸಜ್ಜುಗೊಳಿಸುತ್ತಿದ್ದೇವೆ. ವಿಪತ್ತಿನಿಂದ ಉಂಟಾಗಿರುವ ಸವಾಲುಗಳನ್ನು ಎದುರಿಸಲು ತಂಡಗಳು ಹಗಲು, ರಾತ್ರಿ ಕೆಲಸ ಮಾಡುತ್ತಿವೆ. ಆಡಳಿತ, ಸ್ಥಳೀಯ ಅಧಿಕಾರಿಗಳು, ಎಲ್ಲಾ ಸಂಸ್ಥೆಗಳು ಮತ್ತು ವ್ಯಕ್ತಿಗಳು ಸಹಕಾರದ ಮನೋಭಾವದಿಂದ ಕೈಜೋಡಿಸಬೇಕು' ಎಂದು ತಮಂಗ್ ಹೇಳಿದರು.
ಪ್ರವಾಹ ಪರಿಸ್ಥಿತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಮೂಲಕ ತಮಂಗ್ ವಿವರಿಸಿದ್ದಾರೆ. ಅಗತ್ಯವಿರುವ ಪ್ರದೇಶಗಳಿಗೆ ನೆರವು ಕೋರಿ ಪ್ರಧಾನಿಗೆ ಪತ್ರ ಸಹ ಬರೆದಿದ್ದಾರೆ. ರಾಜ್ಯಕ್ಕೆ ಅಗತ್ಯವಿರುವ ಎಲ್ಲ ಸಹಾಯ ಮಾಡುವುದಾಗಿ ಪ್ರಧಾನಿ ಭರವಸೆ ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹದಿಂದಾಗಿ ರಾಜ್ಯದಲ್ಲಿ 11 ಸೇತುವೆಗಳು ನಾಶವಾಗಿವೆ. ಮಂಗನ್ ಜಿಲ್ಲೆಯೊಂದರಲ್ಲೇ ಎಂಟು ಸೇತುವೆಗಳು ಕೊಚ್ಚಿಹೋಗಿವೆ. ನಾಮ್ಚಿಯಲ್ಲಿ ಎರಡು ಸೇತುವೆಗಳು ಮತ್ತು ಗ್ಯಾಂಗ್ಟಕ್‌ನಲ್ಲಿ ಒಂದು ಸೇತುವೆ ನಾಶವಾಗಿವೆ. ಪ್ರವಾಹ ಪೀಡಿತ ನಾಲ್ಕು ಜಿಲ್ಲೆಗಳಲ್ಲಿ ನೀರಿನ ಪೈಪ್ ಲೈನ್ ಗಳು, ಒಳಚರಂಡಿ ಮಾರ್ಗಗಳು ಮತ್ತು ಕುಚ್ಚಾ ಹಾಗೂ ಕಾಂಕ್ರೀಟ್ ಎರಡೂ ಸೇರಿ 277 ಮನೆಗಳು ನೆಲಸಮವಾಗಿವೆ.
ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳಿಗೆ ಜಾಗರೂಕತೆ ವಹಿಸಲು ಸೂಚಿಸಲಾಗಿದೆ ಎಂದು ತಮಂಗ್ ಹೇಳಿದರು.
ಪ್ರವಾಹದಿಂದ ಚುಂಗ್‌ತಾಂಗ್ ಪಟ್ಟಣವು ಶೇಕಡ 80 ರಷ್ಟು ಬಾಧಿತವಾಗಿದೆ. ಸಿಕ್ಕಿಂ ಹಾಗೂ ಪಶ್ಚಿಮ ಬಂಗಾಳ ಸಂಪರ್ಕಿಸುವ ಮುಖ್ಯ ಮಾರ್ಗ ರಾಷ್ಟ್ರೀಯ ಹೆದ್ದಾರಿ 10 ಅನೇಕ ಕಡೆ ಕೊಚ್ಚಿಹೋಗಿದೆ.
'ಚುಂಗ್‌ತಾಂಗ್ ಮತ್ತು ಮಂಗನ್‌ನಲ್ಲಿ ನಾಲ್ಕು ಪ್ರಮುಖ ಸೇತುವೆಗಳು ತೀವ್ರವಾಗಿ ಹಾನಿಗೊಳಗಾಗಿವೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಗಡಿ ರಸ್ತೆ ಸಂಸ್ಥೆ (ಬಿಆರ್‌ಒ) ರಾಜ್ಯಕ್ಕೆ ಸಹಾಯ ಮಾಡುತ್ತಿದೆ. ನಿರಂತರ ಮಳೆ ಮತ್ತು ಪ್ರತಿಕೂಲ ಹವಾಮಾನದ ಹೊರತಾಗಿಯೂ 200ಕ್ಕೂ ಹೆಚ್ಚು ಜನರನ್ನು ಬಿಆರ್‌ಒ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ' ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ರಾವತ್ ತಿಳಿಸಿದ್ದಾರೆ.
ಚುಂಗ್‌ತಾಂಗ್, ಲಾಚುಂಗ್ ಮತ್ತು ಲಾಚೆನ್‌ನಲ್ಲಿರುವ ಸಿಲುಕಿರುವ ನಾಗರಿಕರು ಮತ್ತು ಪ್ರವಾಸಿಗರೊಂದಿಗೆ ಮೊಬೈಲ್ ಮೂಲಕ ಸಂಪರ್ಕ ಸಾಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ನಿರಂತರ ಮಳೆಯಿಂದಾಗಿ ನೀರಿನ ಮಟ್ಟ ಏರುತ್ತಿರುವುದರಿಂದ ತೀಸ್ತಾ ನದಿ ಪಾತ್ರದ ಜನರು ಬೇರೆಡೆಗೆ ಹೋಗುವಂತೆ ಎಸ್‌ಎಸ್‌ಡಿಎಂಎ ಸಲಹೆ ನೀಡಿದೆ.