ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆಗೆ ಒಳಗಾದ ನಂತರ ಹದಿನಾಲ್ಕು ಮಕ್ಕಳಲ್ಲಿ ಎಚ್ಐವಿ, ಹೆಪಟೈಟಿಸ್ ಬಿ ಮತ್ತು ಹೆಪಟೈಟಿಸ್ ಸಿ ಯಂತಹ ಮಾರಣಾಂತಿಕ ಸೋಂಕು ಪತ್ತೆಯಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಲಾಲಾ ಲಜಪತ್ ರಾಯ್ ಆಸ್ಪತ್ರೆಯಲ್ಲಿ ಆಘಾತಕಾರಿ ಈ ಘಟನೆ ನಡೆದಿದ್ದು, ದಾನಿಗಳಿಂದ ರಕ್ತ ಪಡೆದ ಮೇಲೆ ಅದನ್ನು ಸರಿಯಾಗಿ ಪರಿಶೀಲನೆ ನಡೆಸಬೇಕು. ಅಲ್ಲದೆ ಪಡೆದ ರಕ್ತವನ್ನು ಇನ್ನೊಬ್ಬರಿಗೆ ನೀಡುವಾಗ ಪರಿಶೀಲನೆ ನಡೆಸಿ ನೀಡಬೇಕು. ಆದರೆ ರಕ್ತ ನೀಡುವ ಕಾರ್ಯದ ವೇಳೆ ಉಂಟಾದ ಲೋಪ ದೋಷದ ಕಾರಣದಿಂದ ಈ ರೀತಿ ಆಗಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಕಾನ್ಪುರ ನಗರ, ಇಟಾವಾ ಮತ್ತು ಕನ್ನೌಜ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 6 ರಿಂದ 16 ವರ್ಷದೊಳಗಿನ 14 ಮಕ್ಕಳಿಗೆ ಎಚ್ಐವಿ, ಹೆಪಟೈಟಿಸ್ ಬಿ ಮತ್ತು ಹೆಪಟೈಟಿಸ್ ಸಿ ಪಾಸಿಟಿವ್ ಬಂದಿದೆ. ಅವರಲ್ಲಿ ಏಳು ಮಂದಿ ಹೆಪಟೈಟಿಸ್ ಬಿ, ಐವರು ಹೆಪಟೈಟಿಸ್ ಸಿ ಮತ್ತು ಇಬ್ಬರಿಗೆ ಎಚ್‌ಐವಿ ಸೋಂಕು ದೃಢಪಟ್ಟಿದೆ ಎಂದು ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಅರುಣ್ ಆರ್ಯ ಅವರು ಹೇಳಿದ್ದಾರೆ.
ನಾವು ಹೆಪಟೈಟಿಸ್ ರೋಗಿಗಳನ್ನು ಗ್ಯಾಸ್ಟ್ರೋಎಂಟರಾಲಜಿ ವಿಭಾಗಕ್ಕೆ ಮತ್ತು ಎಚ್‌ಐವಿ ರೋಗಿಗಳನ್ನು ಕಾನ್ಪುರದ ರೆಫರಲ್ ಸೆಂಟರ್‌ಗೆ ಹೆಚ್ಚಿನ ಪರೀಕ್ಷೆಗೆ ಕಳುಹಿಸಿದ್ದೇವೆ, ಎಚ್‌ಐವಿ ಸೋಂಕು ಆತಂಕಕಾರಿಯಾಗಿದೆʼ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ 180 ಥಲಸ್ಸೆಮಿಯಾ ರೋಗಿಗಳು ಕೇಂದ್ರದಲ್ಲಿ ರಕ್ತ ವರ್ಗಾವಣೆಗೆ ಒಳಗಾಗಿದ್ದಾರೆ. ಪ್ರತಿ ಆರು ತಿಂಗಳಿಗೊಮ್ಮೆ ವೈರಲ್ ಕಾಯಿಲೆಗಳಿಗೆ ತಪಾಸಣೆ ನಡೆಯುತ್ತದೆ. ಈ 14 ಮಕ್ಕಳು ಖಾಸಗಿ, ಜಿಲ್ಲಾ ಆಸ್ಪತ್ರೆ ಹಾಗೂ ಕೆಲವು ಸಮಯ ಸ್ಥಳೀಯವಾಗಿ ಅವರಿಗೆ ತುರ್ತು ಅಗತ್ಯವಿದ್ದಾಗ ರಕ್ತ ಪಡೆದಿದ್ದಾರೆ. ಈ ಮಕ್ಕಳು ಈಗಾಗಲೇ ಆರೋಗ್ಯ ಸಮಸ್ಯೆಯನ್ನು ಹೊಂದಿದ್ದು, ಇದೀಗ ಅವರ ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.