ಟೆಲ್ಅವಿವ್: ಇಸ್ರೇಲಿ ಯುದ್ಧವಿಮಾನಗಳು ಉತ್ತರ ಗಾಜಾದಲ್ಲಿ ತೀವ್ರವಾದ ರಾತ್ರಿ ದಾಳಿ ನಡೆಸಿದ್ದು, ಈ ವೇಳೆ ಹಮಾಸ್ ಉಗ್ರರ ಸುಮಾರು 150 "ಸುರಂಗ ಅಡಗುದಾಣ ಗುರಿಗಳನ್ನು'' ನಾಶಪಡಿಸಲಾಗಿದೆ ಎಂದು ಇಸ್ರೇಲ್ ಸೇನೆ ಶನಿವಾರ ಹೇಳಿದೆ.
ಇಸ್ರೇಲ್ ದೇಶದ ಇತಿಹಾಸದಲ್ಲೇ ಹಮಾಸ್ ಉಗ್ರರು ನಡೆಸಿದ ಅತ್ಯಂತ ಭೀಕರ ದಾಳಿಯ ಮೂರು ವಾರಗಳ ನಂತರ ಸೇನೆ ಗಾಜಾದಲ್ಲಿನ ಸುರಂಗ ಗುರಿಗಳನ್ನು ನಾಶಪಡಿಸಿದ ಕುರಿತು ಮೊದಲ ಬಾರಿಗೆ ಅಧಿಕೃತ ಹೇಳಿಕೆ ನೀಡಿದೆ. ಈ ಹೇಳಿಕೆಯಲ್ಲಿ ದಾಳಿಗೊಳಗಾದ ಪ್ರದೇಶಗಳಲ್ಲಿ ಹಮಾಸ್ ಉಗ್ರರ ಸುರಂಗ ಅಡಗುದಾಣಗಳು, ಭಯೋತ್ಪಾದಕ ಸುರಂಗಗಳು, ಭೂಗತ ಯುದ್ಧ ಸ್ಥಳಗಳು ಮತ್ತು ಹೆಚ್ಚುವರಿ ಭೂಗತ ಮೂಲಸೌಕರ್ಯಗಳು ಸೇರಿವೆ ಎನ್ನಲಾಗಿದೆ. ಅಲ್ಲದೆ ಈ ದಾಳಿಯಲ್ಲಿ ಹಲವಾರು ಹಮಾಸ್ ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಇಸ್ರೇಲ್ ಸೇನೆ ಸ್ಪಷ್ಟಪಡಿಸಿದೆ.
ಗಾಜಾ ಪಟ್ಟಿ ಮತ್ತು ದಕ್ಷಿಣ ಇಸ್ರೇಲ್‌ನ ವರದಿಗಾರರು ಶನಿವಾರವೂ ಶೆಲ್ ದಾಳಿ ಮತ್ತು ವೈಮಾನಿಕ ದಾಳಿಗಳು ಮುಂದುವರಿದಿವೆ. ಆದರೆ ಅವು ರಾತ್ರಿಗಿಂತ ಕಡಿಮೆ ತೀವ್ರವಾಗಿವೆ ಎಂದು ಹೇಳಿದರು. ಇಸ್ರೇಲಿ ಮಿಲಿಟರಿಯ ಪ್ರತ್ಯೇಕ ಹೇಳಿಕೆಯಲ್ಲಿ, ದಾಳಿಯು ಹಮಾಸ್ ವಾಯು ದಾಳಿಯ ಮುಖ್ಯಸ್ಥ ಅಸೆಮ್ ಅಬು ರಕಾಬಾ ನನ್ನು ಕೊಲ್ಲಲಾಗಿದೆ. ಈತ ಯುದ್ಧವನ್ನು ಪ್ರಾರಂಭಿಸಿದ ಅಕ್ಟೋಬರ್ 7 ರ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ಅದು ಹೇಳಿದೆ. ಅಂತೆಯೇ ಇಸ್ರೇಲಿ ಮಿಲಿಟರಿ ಪ್ರಕಾರ, ಅಬು ರಕಾಬಾ ಹಮಾಸ್ ಡ್ರೋನ್‌ಗಳು, ಪ್ಯಾರಾಗ್ಲೈಡರ್‌ಗಳು, ವೈಮಾನಿಕ ಪತ್ತೆ ಮತ್ತು ವೈಮಾನಿಕ ರಕ್ಷಣೆಯನ್ನು ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ.
"ಅಬು ರಕಾಬಾ ಪ್ಯಾರಾಗ್ಲೈಡರ್‌ಗಳಲ್ಲಿ ಇಸ್ರೇಲ್‌ಗೆ ನುಸುಳಿರುವ ಭಯೋತ್ಪಾದಕರನ್ನು ನಿರ್ದೇಶಿಸುತ್ತಿದ್ದ. ಮತ್ತು ಐಡಿಎಫ್ (ಇಸ್ರೇಲ್ ರಕ್ಷಣಾ ಪಡೆಗಳು) ಪೋಸ್ಟ್‌ಗಳ ಮೇಲೆ ಡ್ರೋನ್ ದಾಳಿಗೆ ಕಾರಣನಾಗಿದ್ದ" ಎಂದು ಹೇಳಿಕೆಯೊಂದು ತಿಳಿಸಿದೆ.
ಗಡಿಯಾಚೆಗಿನ ದಾಳಿಯಲ್ಲಿ 1,400 ಜನರು, ಮುಖ್ಯವಾಗಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಹೇಳಿದ್ದು, ಹಮಾಸ್ ನಡೆಸುತ್ತಿರುವ ಗಾಜಾ ಪಟ್ಟಿಯಲ್ಲಿರುವ ಆರೋಗ್ಯ ಸಚಿವಾಲಯವು ಇಸ್ರೇಲ್‌ನ ದಾಳಿಯಲ್ಲಿ 7,300 ಕ್ಕೂ ಹೆಚ್ಚು ಜನರು ಹೆಚ್ಚಾಗಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಹೇಳುತ್ತಿದೆ.