ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಧಿಕಾರ ವಹಿಸಿಕೊಂಡು ಒಂದು ವರ್ಷ ಪೂರೈಸಿದ್ದು, ಅವರ ನಾಯಕತ್ವದಲ್ಲಿ ಪಕ್ಷವು ಮಹತ್ವದ ಪ್ರಗತಿ ಸಾಧಿಸಿದೆ ಮತ್ತು ಸಂಘಟನೆಯನ್ನು ಪುನಶ್ಚೇತನಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪಕ್ಷವು ಗುರುವಾರ ಹೇಳಿದೆ.
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಧಿಕಾರ ವಹಿಸಿಕೊಂಡು ಒಂದು ವರ್ಷ ಪೂರೈಸಿದ್ದು, ಅವರ ನಾಯಕತ್ವದಲ್ಲಿ ಪಕ್ಷವು ಮಹತ್ವದ ಪ್ರಗತಿ ಸಾಧಿಸಿದೆ ಮತ್ತು ಸಂಘಟನೆಯನ್ನು ಪುನಶ್ಚೇತನಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪಕ್ಷವು ಗುರುವಾರ ಹೇಳಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪಕ್ಷದ ಆಂತರಿಕ ಚುನಾವಣೆಯಲ್ಲಿ ಶಶಿ ತರೂರ್ ಅವರನ್ನು ಸೋಲಿಸಿ ಕಾಂಗ್ರೆಸ್ ಅಧ್ಯಕ್ಷರಾಗಿ ಖರ್ಗೆ ಆಯ್ಕೆಯಾಗಿದ್ದರು. ಅಕ್ಟೋಬರ್ 26ರಂದು ಅಧಿಕೃತವಾಗಿ ಖರ್ಗೆ ಅಧಿಕಾರ ವಹಿಸಿಕೊಂಡಿದ್ದರು.
'ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜನರ ಒಳಿತಿಗೆ ಬದ್ಧರಾಗಿದ್ದಾರೆ. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ತತ್ವಗಳಾದ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಜಾತ್ಯತೀತತೆ, ಅಂತರ್ಗತ ಬೆಳವಣಿಗೆ ಮತ್ತು ದೇಶಭಕ್ತಿಯ ತತ್ವಗಳನ್ನು ಸಾಕಾರಗೊಳಿಸಿದ್ದಾರೆ' ಎಂದು ಕಾಂಗ್ರೆಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
'ಹಂತ ಹಂತವಾಗಿ ಉನ್ನತ ಹುದ್ದೆಗೆ ಏರಿದ ಅವರು, ಉತ್ಸಾಹ ಮತ್ತು ಪರಿಶ್ರಮದಿಂದ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ' ಎಂದು ಪಕ್ಷ ಹೇಳಿದೆ. ಬ್ಲಾಕ್ ಮಟ್ಟದಿಂದ ಪಕ್ಷದ ಚುನಾಯಿತ ಅಧ್ಯಕ್ಷರಾಗುವವರೆಗೆ, 55 ವರ್ಷಗಳ ಚುನಾವಣಾ ಯಶಸ್ಸಿನೊಂದಿಗೆ ಅವರ ಪ್ರಯಾಣವು ಅವರ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಪ್ರಜಾಪ್ರಭುತ್ವದ ಬದ್ಧತೆಗೆ ಸಾಕ್ಷಿಯಾಗಿದೆ' ಎಂದು ಕಾಂಗ್ರೆಸ್ ಹೇಳಿದೆ.
'ಅವರು (ಖರ್ಗೆ) ತಾವು ನಂಬಿದ ಆದರ್ಶಗಳಿಗಾಗಿ ಹೋರಾಡುವ ಮತ್ತು ಅವುಗಳನ್ನು ರಕ್ಷಿಸುವ ನಿರ್ಭೀತ ನಾಯಕರಾಗಿದ್ದಾರೆ. ಬಡವರು ಮತ್ತು ತುಳಿತಕ್ಕೊಳಗಾದವರ ಹಕ್ಕುಗಳ ರಕ್ಷಕರಾಗಿದ್ದಾರೆ'ಎಂದು ಪಕ್ಷ ಹೇಳಿದೆ.
ಖರ್ಗೆಯವರು ದೂರದೃಷ್ಟಿಯ ನಾಯಕರಾಗಿದ್ದು, ಅವರು ಭಾರತಕ್ಕೆ ಉತ್ತಮ ಭವಿಷ್ಯವನ್ನು ನಿರ್ಮಿಸಲು ಬದ್ಧರಾಗಿದ್ದಾರೆ ಎಂದು ಅದು ಪ್ರತಿಪಾದಿಸಿದೆ.
ಖರ್ಗೆ ಅವರಿಗೆ ಕಾಂಗ್ರೆಸ್‌ನ ಹಲವು ನಾಯಕರು ಶುಭಾಶಯಗಳನ್ನು ತಿಳಿಸಿದ್ದಾರೆ. 'ಖರ್ಗೆ ಜೀ ಅವರಿಗೆ ನನ್ನ ಪ್ರಣಾಮಗಳು. ಮುಂಬರುವ ಚುನಾವಣಾ ಹೋರಾಟಗಳಲ್ಲಿ ನಮ್ಮನ್ನು ಬಲವಾಗಿ ಮುನ್ನಡೆಸಿ!' ಎಂದು ಎಕ್ಸ್ ಪೋಸ್ಟ್‌ನಲ್ಲಿ ಶಶಿ ತರೂರ್ ಹೇಳಿದ್ದಾರೆ.