ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ನಿಯಮಗಳು ಹಾಗೂ ಶಾಸನಬದ್ಧ ನಿಯಮಗಳನ್ನು ಪಾಲಿಸದಿರುವ ವೈದ್ಯಕೀಯ ಕಾಲೇಜುಗಳಿಗೆ, ಇನ್ನು ಮುಂದೆ ಪ್ರತಿ ನಿಯಮ ಉಲ್ಲಂಘನೆಗೆ ₹ 1 ಕೋಟಿವರೆಗೂ ದಂಡ ವಿಧಿಸಬಹುದಾಗಿದೆ.
ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ನಿಯಮಗಳು ಹಾಗೂ ಶಾಸನಬದ್ಧ ನಿಯಮಗಳನ್ನು ಪಾಲಿಸದಿರುವ ವೈದ್ಯಕೀಯ ಕಾಲೇಜುಗಳಿಗೆ, ಇನ್ನು ಮುಂದೆ ಪ್ರತಿ ನಿಯಮ ಉಲ್ಲಂಘನೆಗೆ ₹ 1 ಕೋಟಿವರೆಗೂ ದಂಡ ವಿಧಿಸಬಹುದಾಗಿದೆ.
ಇದೂ ಸೇರಿದಂತೆ ವಿವಿಧ ನಿಯಮಗಳ ಕುರಿತು ಆಯೋಗವು ಸೆ. 27ರಂದು ಅಧಿಸೂಚನೆ ಹೊರಡಿಸಿದೆ. ರೋಗಿಗಳ ಕುರಿತ ಸುಳ್ಳುದಾಖಲೆ ಮತ್ತು ಕಡತವನ್ನು ಒದಗಿಸುವ ವೈದ್ಯಕೀಯ ಕಾಲೇಜುಗಳ ವಿಭಾಗಗಳ ಮುಖ್ಯಸ್ಥರು, ಡೀನ್‌ಗಳು, ನಿರ್ದೇಶಕರು, ವೈದ್ಯರಿಗೆ ₹ 5 ಲಕ್ಷದವರೆಗೂ ದಂಡ ವಿಧಿಸಲು ಅವಕಾಶವಿದೆ.
ಅಲ್ಲದೆ, ದುರ್ನಡತೆಗಾಗಿ ನೋಂದಾಯಿತ ವೈದ್ಯರು (ವೃತ್ತಿಪರ ನಡತೆ) ನಿಯಮಗಳು ಹಾಗೂ ವೈದ್ಯಕೀಯ ಶಿಕ್ಷಣ ಗುಣಮಟ್ಟ ನಿರ್ವಹಣೆ ನಿಯಮಗಳ (2023) ಅನ್ವಯವೂ ದಂಡ ವಿಧಿಸಬಹುದು ಎಂದು ತಿಳಿಸಿದೆ.
ಹೊಸ ನಿಯಮದ ಅನುಸಾರ, ವೈದ್ಯಕೀಯ ಕಾಲೇಜುಗಳು ನಿಯಮಗಳನ್ನು ಪಾಲಿಸದಿದ್ದಲ್ಲಿ ಆಯೋಗವು ಕಾಲೇಜಿಗೆ ನೀಡಿರುವ ಮಾನ್ಯತೆಯನ್ನು ಐದು ಶೈಕ್ಷಣಿಕ ವರ್ಷಗಳವರೆಗೂ ತಡೆಹಿಡಿಯಬಹುದಾಗಿದೆ.
ವ್ಯಕ್ತಿಗತವಾಗಿ ಅಥವಾ ಏಜೆನ್ಸಿಗಳ ಮೂಲಕ ವೈದ್ಯಕೀಯ ಪದವಿ ಪರೀಕ್ಷಾ ಮಂಡಳಿ (ಯುಜಿಎಂಇಬಿ), ಸ್ನಾತಕೋತ್ತರ ವೈದ್ಯಕೀಯ ಪದವಿ ಪರೀಕ್ಷಾ ಮಂಡಳಿ (ಪಿಜಿಎಂಇಬಿ) ಅಥವಾ ಎನ್‌ಎಂಸಿಯ ಮೇಲೆ ಪ್ರಭಾವವನ್ನು ಬೀರಲು ಯತ್ನಿಸಿದರೆ ನಿರ್ದಿಷ್ಟ ಕಾಲೇಜಿನ ಅರ್ಜಿಗಳು, ಮನವಿಗಳಿಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳನ್ನು ತಕ್ಷಣವೇ ಸ್ಥಗಿತಗೊಳಿಸಲೂ ಆಯೋಗಕ್ಕೆ ಅಧಿಕಾರವಿದೆ ಎಂದು ನಿಯಮ ರೂಪಿಸಲಾಗಿದೆ.
ಹೊಸ ನಿಯಮಗಳ ಅನುಸಾರ, ವೈದ್ಯಕೀಯ ಕಾಲೇಜುಗಳು ವಾರ್ಷಿಕ ವರದಿ ಸಲ್ಲಿಸುವುದು ಕಡ್ಡಾಯ. ಈ ಮೂಲಕ ಎಲ್ಲ ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂಬುದು ದೃಢಪಡಿಸಬೇಕಾಗಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗದ ಕಾಯ್ದೆಯ ಒಟ್ಟಾರೆ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಆಯಾ ಪರೀಕ್ಷಾ ಮಂಡಳಿಗಳು ಈ ವರದಿಯ ಮೌಲ್ಯಮಾಪನ ಮಾಡಬಹುದಾಗಿದೆ.