ವಾಷಿಂಗ್ಟನ್: ವಲಸೆಯೇತರ ಎಚ್-1ಬಿ ವೀಸಾ ನೀಡುವ ಕಾರ್ಯಕ್ರಮದಲ್ಲಿ ಬದಲಾವಣೆಗಳನ್ನು ತರಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಡಳಿತ ಮುಂದಾಗಿದೆ.
ಅರ್ಹತೆ ಆಧಾರದಲ್ಲಿ ವೀಸಾ ನೀಡುವುದು, ವಿದ್ಯಾರ್ಥಿಗಳಿಗೆ, ಉದ್ಯಮಶೀಲರಿಗೆ ಹಾಗೂ ಲಾಭ ಗಳಿಸುವ ಉದ್ದೇಶವಿಲ್ಲದ ಸಂಸ್ಥೆಗಳಲ್ಲಿ ಉದ್ಯೋಗ ಮಾಡಲು ಬರುವವರಿಗೆ ವೀಸಾ ನೀಡುವ ಪ್ರಕ್ರಿಯೆಯನ್ನು ಸುಲಭಗೊಳಿಸುವುದು ಹಾಗೂ ಹೆಚ್ಚು ಪ್ರಯೋಜನ ಸಿಗುವಂತೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ.
ಆದರೆ, ಪ್ರತಿ ವರ್ಷ 60 ಸಾವಿರ ವೀಸಾಗಳನ್ನು ನೀಡಲಾಗುತ್ತದೆ. ಈ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡುವ ಪ್ರಸ್ತಾವ ಇಲ್ಲ.
ವೀಸಾ ನೀಡಿಕೆಗೆ ಸಂಬಂಧಿಸಿದ ಹೊಸ ನಿಯಮಗಳನ್ನು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ (ಯುಎಸ್‌ಸಿಐಎಸ್) ಇಲಾಖೆಯು ಇದೇ 23ರಂದು ಪ್ರಕಟಿಸಲಿದೆ.
'ವಿಶ್ವದ ವಿವಿಧೆಡೆ ಇರುವ ಪ್ರತಿಭಾವಂತರನ್ನು ಆಕರ್ಷಿಸುವುದು, ಅಮೆರಿಕದಲ್ಲಿನ ಉದ್ಯೋಗದಾತರ ಹೊರೆಯನ್ನು ಕಡಿಮೆ ಮಾಡುವುದು ಹಾಗೂ ವಲಸೆ ವ್ಯವಸ್ಥೆಯ ದುರುಪಯೋಗ ಹಾಗೂ ವಂಚನೆ ತಡೆಗಟ್ಟುವುದೇ ಬೈಡನ್-ಕಮಲಾ ಹ್ಯಾರಿಸ್ ನೇತೃತ್ವದ ಆಡಳಿತ ಆದ್ಯತೆಯಾಗಿದೆ. ಇದಕ್ಕಾಗಿಯೇ ವೀಸಾ ನಿಯಮಗಳಲ್ಲಿ ಬದಲಾವಣೆಗಳನ್ನು ತರಲು ಆಡಳಿತ ಮುಂದಾಗಿದೆ' ಎಂದು ಆಂತರಿಕ ಭದ್ರತೆ ಕಾರ್ಯದರ್ಶಿ ಅಲೆಜಾಂಡ್ರೊ ಮೇಯರ್‌ಕಾಸ್ ಹೇಳಿದ್ದಾರೆ.