ಅಹಮದಾಬಾದ್: 2023ರ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಭಾರತ ಸೋಲಿಸಿದ್ದು ಈ ಮೂಲಕ ವಿಶ್ವಕಪ್‌ನಲ್ಲಿ ಸತತ 8ನೇ ಗೆಲುವು ಸಾಧಿಸಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಮಣಿಸಿದೆ. ಪಾಕಿಸ್ತಾನ 42.5 ಓವರ್‌ಗಳಲ್ಲಿ ಕೇವಲ 191 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತವು 30.3 ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಬಾರಿಸುವ ಮೂಲಕ ಗೆಲುವಿನ ನಗೆ ಬೀರಿತು.
ಭಾರತದ ಪರ ರೋಹಿತ್ ಶರ್ಮಾ 86, ಶುಭ್ಮನ್ ಗಿಲ್ 16, ವಿರಾಟ್ ಕೊಹ್ಲಿ 16 ರನ್ ಗೆ ಔಟಾದರು. ಇನ್ನು ಶ್ರೇಯಸ್ ಅಯ್ಯರ್ ಅಜೇಯ 53 ಮತ್ತು ಕೆಎಲ್ ರಾಹುಲ್ ಅಜೇಯ 19 ರನ್ ಪೇರಿಸಿದ್ದಾರೆ.
ಪಾಕ್ ಪರ ನಾಯಕ ಬಾಬರ್ ಅಜಮ್ ಅರ್ಧಶತಕ ಗಳಿಸಿದ್ದು ಮೊಹಮ್ಮದ್ ರಿಜ್ವಾನ್ 49 ರನ್ ಗಳಿಗೆ ಔಟ್ ಆದರು. ಬಾಬರ್ ಮತ್ತು ರಿಜ್ವಾನ್ ಔಟಾದ ನಂತರ, ತಂಡವು ಸರ್ವಪತನದತ್ತ ಸಾಗಿತು. ಇಫ್ತಿಕರ್ ಅಹ್ಮದ್ 4 ರನ್ ಗಳಿಸಿ ಔಟಾದರು. ಶಾದಾಬ್ ಖಾನ್ 2 ರನ್ ಗಳಿಸಿದರೆ ಮೊಹಮ್ಮದ್ ರಿಜ್ವಾನ್ 4 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಹಸನ್ ಅಲಿ 12 ರನ್ ಗಳಿಸಿ ಔಟಾದರೆ, ಶಾಹೀನ್ ಅಫ್ರಿದಿ 2 ರನ್ ಗಳಿಸಿ ಅಜೇಯರಾಗಿ ಉಳಿದರು.
ಅಹಮದಾಬಾದ್‌ನಲ್ಲಿ ಪಾಕಿಸ್ತಾನದ ಮೇಲೆ ಭಾರತದ ಬೌಲರ್‌ಗಳು ಪ್ರಾಬಲ್ಯ ಮೆರೆದರು. ಜಸ್ಪ್ರೀತ್ ಬುಮ್ರಾ 7 ಓವರ್‌ಗಳಲ್ಲಿ 19 ರನ್ ನೀಡಿ 2 ವಿಕೆಟ್ ಪಡೆದರು. ಅವರು ಮೇಡನ್ ಓವರ್ ಬೌಲ್ ಮಾಡಿದರು. ಮೊಹಮ್ಮದ್ ಸಿರಾಜ್ 8 ಓವರ್ ಗಳಲ್ಲಿ 50 ರನ್ ನೀಡಿ 2 ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ 6 ಓವರ್ ಗಳಲ್ಲಿ 34 ರನ್ ನೀಡಿ 2 ವಿಕೆಟ್ ಪಡೆದರು. ಕುಲದೀಪ್ ಯಾದವ್ 10 ಓವರ್ ಗಳಲ್ಲಿ 35 ರನ್ ನೀಡಿ 2 ವಿಕೆಟ್ ಪಡೆದರು. ರವೀಂದ್ರ ಜಡೇಜಾ 9.5 ಓವರ್ ಗಳಲ್ಲಿ 38 ರನ್ ನೀಡಿ 2 ವಿಕೆಟ್ ಪಡೆದರು.
ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಇದು 8ನೇ ಜಯವಾಗಿದೆ. ಇದಕ್ಕೂ ಮುನ್ನ ಭಾರತ 1992, 1996, 1999, 2003, 2011, 2015, 2019ರಲ್ಲಿ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಜಯ ದಾಖಲಿಸಿತ್ತು.