ಒಸ್ಲೊ: ಇರಾನ್‌ನಲ್ಲಿ ಮಹಿಳೆಯರ ಮೇಲಿನ ದಬ್ಬಾಳಿಕೆ ಹೋರಾಡಿದ್ದಕ್ಕಾಗಿ ಜೈಲಿನಲ್ಲಿರುವ ನರ್ಗಿಸ್ ಮಹಮ್ಮದಿ ಅವರಿಗೆ 2023ರ ನೊಬೆಲ್ ಶಾಂತಿ ಪುರಸ್ಕಾರ ಲಭಿಸಿದೆ.
ಈ ವಿಷಯವನ್ನು ತಿಳಿಸಿದ ನಾರ್ವೆ ನೊಬೆಲ್ ಸಮಿತಿಯ ಅಧ್ಯಕ್ಷ ಬೆರಿಟ್ ರೀಸ್ ಆಂಡ್ರೆಸನ್ ಅವರು, 'ಮಹಿಳೆಯರ ಮೇಲೆ ನಡೆಯುತ್ತಿದ್ದ ವ್ಯವಸ್ಥಿತ ತಾರತಮ್ಯ ಹಾಗೂ ದಬ್ಬಾಳಿಕೆ ವಿರುದ್ಧ ನರ್ಗಿಸ್ ಹೋರಾಟ ನಡೆಸಿ ಜೈಲು ಸೇರಿದ್ದಾರೆ' ಎಂದು ಹೇಳಿದರು.
2019ರಲ್ಲಿ ನಡೆದ ಪ್ರತಿಭಟನೆಯಲ್ಲಿ ಪೊಲೀಸರ ಗುಂಡಿಗೆ ಬಲಿಯಾದವರ ಸ್ಮಾರಕಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಳೆದ ನವೆಂಬರ್‌ನಲ್ಲಿ ಅವರನ್ನು ಬಂಧಿಸಲಾಗಿತ್ತು. ಶಿಕ್ಷೆ ಹಾಗೂ ಕಠಿಣ ಶಿಕ್ಷೆಗಳಿಗೆ ಹಲವು ಬಾರಿ ಒಳಗಾಗಿರುವ ನರ್ಗಿಸ್ ಅವರನ್ನು ಬಿಡುಗಡೆ ಮಾಡುವಂತೆ ಜಾಗತಿಕ ಮಟ್ಟದ ಹಲವು ರಾಷ್ಟ್ರಗಳು ಒತ್ತಾಯಿಸಿವೆ.
ಮಹಮ್ಮದಿ ಅವರು ಜೈಲಿಗೆ ಹೋಗುವ ಮೊದಲು ನಿಷೇಧಿತ ಮಾನವ ಹಕ್ಕುಗಳ ಕೇಂದ್ರದ ರಕ್ಷಕರು ಎಂಬ ಸಂಘಟನೆಯ ಉಪಾಧ್ಯಕ್ಷೆಯಾಗಿದ್ದರು. ಜತೆಗೆ ಈ ಸಂಘಟನೆಯ ಹುಟ್ಟುಹಾಕಿದ ಇರಾನ್‌ನ ಮತ್ತೊಬ್ಬ ನೊಬೆಲ್ ಶಾಂತಿ ಪುರಸ್ಕಾರ ಪುರಸ್ಖೃತೆ ಶಿರಿನ್ ಎಬದಿ ಅವರ ನಿಕಟವರ್ತಿಯೂ ಆಗಿದ್ದಾರೆ.
ಎಂಜಿನಿಯರ್ ಆಗಿರುವ ಮಹಮ್ಮದಿ ಅವರಿಗೆ 2018ರಲ್ಲಿ ಅಂಡ್ರೆ ಸಖಾರೊವ ಪ್ರಶಸ್ತಿಯೂ ಲಭಿಸಿದೆ. ಸದ್ಯ ಘೋಷಣೆಯಾಗಿರುವ ನೊಬೆಲ್ ಶಾಂತಿ ಪುರಸ್ಕಾರವು ಹತ್ತು ಲಕ್ಷ ಅಮೆರಿಕನ್ ಡಾಲರ್ ಬಹುಮಾನ ಹಾಗೂ 18 ಕ್ಯಾರೆಟ್ ಚಿನ್ನದ ಪದಕವನ್ನು ಒಳಗೊಂಡಿದೆ.
2009ರಲ್ಲಿ ಅಧ್ಯಕ್ಷ ಮಹಮ್ಮದ್ ಅಹ್ಮದಿನೆಜಾದ್ ಅವರ ಅವಧಿಯಲ್ಲಿ ಘೋಷಣೆಯಾದ ವಿವಾದಿತ ಮರು ಚುನಾವಣೆ ವಿರುದ್ಧ ಹೋರಾಡಿದ್ದ ಇಬದಿ ಅವರು ಧರಣಿ ನಡೆಸಿ, ಪೊಲೀಸರ ದೌರ್ಜನ್ಯಕ್ಕೆ ಒಳಗಾಗಿದ್ದರು ನಂತರ ಇರಾನ್ ತೊರೆದರು.