ಹ್ಯಾಂಗ್ ಝೌ : 2023ರ ಏಷ್ಯನ್ ಗೇಮ್ಸ್ ನಲ್ಲಿ ಭಾರತೀಯ ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದು ಪದಕ ಬೇಟೆ ಮುಂದುವರೆದಿದೆ. ಜಾವೆಲಿನ್ ಥ್ರೋ ಪುರುಷರ ವಿಭಾಗದಲ್ಲಿ ಭಾರತಕ್ಕೆ ಎರಡು ಪದಕ ಸಿಕ್ಕಿದೆ. ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದರೆ ಕಿಶೋರ್ ಜೆನಾ ಬೆಳ್ಳಿ ಪದಕ ಗೆದ್ದಿದ್ದಾರೆ.
ಮಹಿಳೆಯರ 4X400M ರಿಲೇನಲ್ಲಿ ಭಾರತಕ್ಕೆ ಬೆಳ್ಳಿ. ವಿತ್ಯಾ ರಾಮರಾಜ್, ಐಶ್ವರ್ಯ ಕೈಲಾಶ್ ಮಿಶ್ರಾ, ಪ್ರಾಚಿ, ಶುಭಾ ವೆಂಕಟೇಶನ್ ತಂಡ ಫೈನಲ್‌ನಲ್ಲಿ 2:03.75 ಟೈಮಿಂಗ್ ನೊಂದಿಗೆ ಎರಡನೇ ಸ್ಥಾನ ಪಡೆದರು.
ಪುರುಷರ ಹಾಕಿ ವಿಭಾಗದಲ್ಲಿ ಭಾರತ ತಂಡ ದಕ್ಷಿಣ ಕೊರಿಯಾವನ್ನು 5-3 ಗೋಲುಗಳಿಂದ ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಈ ಮೂಲಕ ಹಾಕಿಯಲ್ಲಿ ಪದಕವೊಂದು ಖಚಿತವಾದಂತಾಗಿದೆ.
ಏಷ್ಯನ್ ಗೇಮ್ಸ್ 2023ರಲ್ಲಿ ಭಾರತ ಇಲ್ಲಿಯವರೆಗೂ 18 ಚಿನ್ನ, 31 ಬೆಳ್ಳಿ ಮತ್ತು 32 ಕಂಚಿನ ಪದಕದೊಂದಿಗೆ 81 ಪದಕಗಳನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ. ಕಳೆದ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಒಟ್ಟಾರೆ 70 ಪದಕಗಳನ್ನು ಮಾತ್ರ ಗೆದ್ದಿತ್ತು.
ಇನ್ನು ಆರ್ಚರಿಯಲ್ಲಿ ಓಜಸ್ ಡಿಯೋಟಾಲೆ ಮತ್ತು ಜ್ಯೋತಿ ಸುರೇಖಾ ವೆನ್ನಂ ಮಿಶ್ರ ತಂಡ 159 ಅಂಕಗಳೊಂದಿಗೆ ಕೋರಿಯಾ ತಂಡವನ್ನು ಮಣಿಸಿ ಚಿನ್ನದ ಪದಕ ಗೆದ್ದುಕೊಂಡಿದೆ. ಇನ್ನು ಕೋರಿಯಾ ತಂಡ 158 ಅಂಕಗಳನ್ನು ಸಂಪಾದಿಸಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದೆ.