HEALTH TIPS

2029ಕ್ಕೆ ಏಕಕಾಲ ಚುನಾವಣೆ?; ಎರಡು ಹಂತದಲ್ಲಿ ಮತದಾನ ಸಾಧ್ಯತೆ

              ವದೆಹಲಿ: ದೇಶಾದ್ಯಂತ ಏಕಕಾಲ ಚುನಾವಣೆ ನಡೆಸಲು ಕಾನೂನು ಆಯೋಗ ಸೂತ್ರ ರೂಪಿಸುತ್ತಿದ್ದು, ಕೆಲ ರಾಜ್ಯ ಸರ್ಕಾರಗಳ ಅಧಿಕಾರಾವಧಿಯನ್ನು ವಿಸ್ತರಿಸುವ ಅಥವಾ ಕಡಿಮೆ ಮಾಡುವ ಪ್ರಸ್ತಾಪವನ್ನು ಮುಂದಿಟ್ಟಿದೆ. ಇದರಿಂದಾಗಿ 2029ರ ಲೋಕಸಭೆ ಚುನಾವಣೆಯೊಂದಿಗೆ ಎಲ್ಲಾ ರಾಜ್ಯಗಳ ಚುನಾವಣೆಗಳನ್ನು ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ನಿಯಮ ರೂಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

            ಈ ಸೂತ್ರ ಇನ್ನೂ ಪ್ರಸ್ತಾವನೆ ಹಂತದಲ್ಲಿದೆ. ಹಲವು ಹಂತದ ಚರ್ಚೆ ನಂತರ ಆಯೋಗ ಅಂತಿಮ ಸೂತ್ರದ ಕರಡನ್ನು ಪ್ರಕಟಿಸಲಿದೆ. ಇದಕ್ಕೆ ಸರ್ಕಾರದ ಒಪ್ಪಿಗೆ ದೊರೆತು, ನಿಯಮಗಳಿಗೆ ಅಗತ್ಯ ತಿದ್ದುಪಡಿ ಆದ ನಂತರ ಏಕಕಾಲ ಚುನಾವಣೆ ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

               ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ಈಗಾಗಲೇ ಉನ್ನತ ಮಟ್ಟದ ಸಮಿತಿ ರಚನೆ ಮಾಡಿದೆ. ರಾಷ್ಟ್ರೀಯ ಮತ್ತು ರಾಜ್ಯಗಳಿಗೆ ಪ್ರಸ್ತುತ ಸ್ಥಿತಿ ಆಧರಿಸಿ ಹೊಸ ಚುನಾವಣೆಗಳನ್ನು ನಡೆಸುವ ಬಗ್ಗೆ ನಿಯಮದಲ್ಲಿ ಸೇರ್ಪಡೆ ಮಾಡಲು ಕಾನೂನು ಆಯೋಗ ಚಿಂತನೆ ನಡೆಸಿದೆ ಎನ್ನಲಾಗಿದೆ.

                                                2018ರಲ್ಲೇ ಪ್ರಸ್ತಾವನೆಗೆ ಅನುಮೋದನೆ

                ಏಕಕಾಲ ಚುನಾವಣೆ ಬಗ್ಗೆ 2018ರಲ್ಲಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಪ್ರಸ್ತಾಪವನ್ನು ಕಾನೂನು ಆಯೋಗ ಅನುಮೋದಿಸಿತ್ತು. ದೇಶದಲ್ಲಿ ನಿರಂತರವಾಗಿ ಚುನಾವಣೆಗಳು ನಡೆಯುವುದನ್ನು ಇದು ತಪ್ಪಿಸುತ್ತದೆ ಎಂದು ಹೇಳಿತ್ತು. ಈ ವಿಷಯದ ಕುರಿತು ಹೆಚ್ಚಿನ ಸಾರ್ವಜನಿಕ ಚರ್ಚೆಗೂ ಮನವಿ ಮಾಡಲಾಗಿತ್ತು.

                                                   ಕೆಲ ರಾಜ್ಯಗಳ ಅಧಿಕಾರಾವಧಿ ಮೊಟಕು?

              2029ರಿಂದ ರಾಜ್ಯ ಮತ್ತು ಲೋಕಸಭೆ ಚುನಾವಣೆಗಳನ್ನು ಒಟ್ಟಿಗೆ ನಡೆಸಲು ಕಾನೂನು ಆಯೋಗ ಯೋಜನೆ ರೂಪಿಸುತ್ತಿದೆ. ಆದರೆ ಒಂದೊಂದು ರಾಜ್ಯಗಳ ವಿಧಾನಸಭೆ ಅಧಿಕಾರಾವಧಿ ಬೇರೆ ಬೇರೆ ಇದೆ. ಈ ಕಾರಣಕ್ಕೆ ವಿಧಾನಸಭಾ ಚುನಾವಣೆಗಳನ್ನು ಸಿಂಕ್ರೊನೈಸ್ ಮಾಡಲು ನ್ಯಾ. ರಿತು ರಾಜ್ ಅವಸ್ತಿ ನೇತೃತ್ವದ ಆಯೋಗ ಮುಂದಾಗಿದೆ. ಕೆಲ ರಾಜ್ಯಗಳ ಅಧಿಕಾರಾವಧಿಯನ್ನು ಕಡಿಮೆ ಮಾಡಲು ಅಥವಾ ಹೆಚ್ಚಿಸಲು ಸರ್ಕಾರಕ್ಕೆ ಸಲಹೆ ನೀಡುವ ಸಾಧ್ಯತೆ ಇದೆ. ಈ ವ್ಯವಸ್ಥೆ ಒಮ್ಮೆ ಜಾರಿಗೆ ಬಂದರೆ ಮತದಾರರು ಐದು ವರ್ಷಕ್ಕೆ ಒಮ್ಮೆ ಮಾತ್ರ ಮತಗಟ್ಟೆಗೆ ಹೋಗಿ ಹಕ್ಕು ಚಲಾಯಿಸಿದರೆ ಸಾಕು. ವಿಧಾನಸಭೆ ಮತ್ತು ಸಂಸತ್ತಿನ ಚುನಾವಣೆಗಳನ್ನು ಒಟ್ಟಿಗೆ ನಡೆಸಬಹುದು ಎಂದು ಆಯೋಗವು ಅಭಿಪ್ರಾಯಪಟ್ಟಿದೆ. ಸುಗಮ ಪ್ರಕ್ರಿಯೆಗೆ ಇನ್ನಷ್ಟು ಹೊಸ ವಿಧಾನಗಳನ್ನು ರೂಪಿಸುವ ಕೆಲಸ ನಡೆಯುತ್ತಿದೆ ಎಂದು ಆಯೋಗದ ಅಧಿಕಾರಿಗಳು ಹೇಳಿದ್ದಾರೆ.

                                                          ಕೋವಿಂದ ನೇತೃತ್ವದ ಸಮಿತಿ

             ಏಕಕಾಲ ಚುನಾವಣೆ ನಡೆಸುವ ಮಾರ್ಗಗಳನ್ನು ಕಾನೂನು ಆಯೋಗ ಪರಿಶೀಲಿಸುತ್ತಿದ್ದರೆ, ಮೊತ್ತೊಂದೆಡೆ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿ ಈ ವಿಷಯದಲ್ಲಿ ಎದುರಾಗುವ ಕಾನೂನು ತೊಡಕು ನಿವಾರಣೆ, ಸಂವಿಧಾನ ತಿದ್ದುಪಡಿ ಇನ್ನಿತರ ವಿಷಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಿದೆ. ಈ ಸಮಿತಿ ಈಗಾಗಲೇ ಒಂದು ಸಭೆಯನ್ನು ನಡೆಸಿದ್ದು, ತನ್ನ ಕೆಲಸ ಆರಂಭಿಸಿದೆ. ಕೋವಿಂದ ಸಮಿತಿಯ ಶಿಫಾರಸು, ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಮತ್ತು ರಾಜ್ಯ ಚುನಾವಣೆಗಳ ಜತೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಲು ಕಾನೂನು ಆಯೋಗ ಕರಡು ರಚನೆ ಮಾಡಲಿದೆ ಮೂಲಗಳು ತಿಳಿಸಿವೆ.

                                                      ಒಂದೇ ಮತದಾರರ ಪಟ್ಟಿ

               ಪ್ರಸ್ತುತ ಲೋಕಸಭೆ, ವಿಧಾನಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪ್ರತ್ಯೇಕವಾಗಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಈಗ ಏಕಕಾಲ ಚುನಾವಣೆಗೆ ಸಾಮಾನ್ಯ ಮತದಾರರ ಪಟ್ಟಿಯನ್ನು ರಚಿಸುವ ಕಾರ್ಯವಿಧಾನವನ್ನು ಕಾನೂನು ಸಮಿತಿ ರೂಪಿಸುತ್ತಿದೆ. ಇದರಿಂದ ಮತದಾರರ ಪಟ್ಟಿ ತಯಾರಿಕೆಗೆ ಚುನಾವಣಾ ಆಯೋಗ ಮತ್ತು ವಿವಿಧ ರಾಜ್ಯಗಳ ಮಾನವಶಕ್ತಿಯ ಬಳಕೆ ಮತ್ತು ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಹಲವು ಸಮಸ್ಯೆಗಳು ಇನ್ನೂ ಇತ್ಯರ್ಥವಾಗದ ಕಾರಣ ಏಕಕಾಲ ಚುನಾವಣೆ ಕುರಿತು ಕಾನೂನು ಆಯೋಗದ ಅಂತಿಮ ವರದಿ ಸಿದ್ಧವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

                                                           ಸಾಧ್ಯತೆ ಏನು?

                ಲೋಕಸಭೆ, ವಿಧಾನಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳು ಹೀಗೆ ಮೂರು ವಿಧದ ಚುನಾವಣೆಯನ್ನು ಒಂದೇ ವರ್ಷದಲ್ಲಿ ಎರಡು ಹಂತಗಳಲ್ಲಿ ನಡೆಸುವ ಬಗ್ಗೆ ಕಾನೂನು ಆಯೋಗ ಕೇಂದ್ರಕ್ಕೆ ಶಿಫಾರಸು ಮಾಡುವ ಸಾಧ್ಯತೆ ಇದೆ. ಮೊದಲ ಹಂತದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡೆಯಲಿದ್ದು, ಎರಡನೇ ಹಂತದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ. ದೇಶದ ಹವಾಮಾನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರಾಯೋಗಿಕವಾಗಿ ಇದನ್ನು ಜಾರಿಗೆ ತರಲಾಗುವುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries