ನವದೆಹಲಿ: ಪ್ರಸ್ತುತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತವು 2030ರ ವೇಳೆಗೆ 7.3 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ಜಪಾನ್ ದೇಶವನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಎಸ್ಆಂಡ್ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್ ಹೇಳಿದೆ.
ಭಾರತ 2021 ಮತ್ತು 2022ರಲ್ಲಿ ಕ್ಷಿಪ್ರ ಆರ್ಥಿಕ ಬೆಳವಣಿಗೆ ಸಾಧಿಸಿದೆ. ದೇಶದ ಆರ್ಥಿಕತೆಯು 2023ರಲ್ಲಿ ಉತ್ತಮ ಬೆಳವಣಿಗೆಯನ್ನು ತೋರಿಸುತ್ತಿದೆ. ಭಾರತದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಮಾರ್ಚ್ 2024ರಲ್ಲಿ ಕೊನೆಗೊಳ್ಳುವ ಹಣಕಾಸಿನ ವರ್ಷದಲ್ಲಿ ಶೇ. 6.3 ಬೆಳವಣಿಗೆ ಸಾಧಿಸುವ ನಿರೀಕ್ಷೆ ಇದೆ. ಈ ಮೂಲಕ ಪ್ರಸ್ತುತ ಹಣಕಾಸು ವರ್ಷದಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ದೇಶ ಭಾರತವಾಗಿದೆ.
ಪ್ರಸ್ತುತ ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಾದ ಭಾರತ ಏಪ್ರಿಲ್-ಜೂನ್ ತ್ರೖೆಮಾಸಿಕದಲ್ಲಿ ಶೇ. 7.8 ಬೆಳವಣಿಗೆ ಕಂಡಿದೆ. 2023ರ ಉಳಿದ ಅವಧಿಯಲ್ಲಿ ಮತ್ತು 2024ರಲ್ಲಿ ನಿರಂತರವಾದ ಪ್ರಗತಿ ಕಂಡುಬರಲಿದೆ. ದೇಶೀಯ ಬೇಡಿಕೆಯ ಹೆಚ್ಚಳವಾಗುತ್ತಿರುವುದು ಇದಕ್ಕೆ ಕಾರಣ ಎಂದು ಎಸ್ಆಂಡ್ಪಿ ಗ್ಲೋಬಲ್ ಹೇಳಿದೆ.
ಅಮೆರಿಕ ನಂ.1
ಅಮೆರಿಕ ಪ್ರಸ್ತುತ 25.5 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿದೆ. ಇದು ಇಡೀ ವಿಶ್ವದ ಜಿಡಿಪಿಯ ಕಾಲು ಭಾಗ ಹೊಂದಿದೆ. ಸುಮಾರು 18 ಟ್ರಿಲಿಯನ್ ಡಾಲರ್ ಗಾತ್ರದೊಂದಿಗೆ ಚೀನಾ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಇದು ವಿಶ್ವದ ಜಿಡಿಪಿಯ ಸುಮಾರು ಶೇ. 17.9 ಆಗಿದೆ. 4.2 ಟ್ರಿಲಿಯನ್ ಡಾಲರ್ ಹೊಂದಿರುವ ಜಪಾನ್ ಮೂರನೇ ಸ್ಥಾನದಲ್ಲಿದೆ. 4 ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಿರುವ ಜರ್ಮನಿ ನಂತರದ ಸ್ಥಾನದಲ್ಲಿದೆ.
ಟಾಪ್ ತ್ರೀ ದೇಶಗಳ ಡಿಜಿಪಿ ಎಷ್ಟು ?
1. ಅಮೆರಿಕ - 25.5 ಟ್ರಿಲಿಯನ್ ಡಾಲರ್
2. ಚೀನಾ - 18 ಟ್ರಿಲಿಯನ್ ಡಾಲರ್
3. ಜಪಾನ್ - 4.2 ಟ್ರಿಲಿಯನ್ ಡಾಲರ್
ಡಿಜಿಟಲ್ ಇಂಡಿಯಾ ಪರಿಣಾಮ
ಭಾರತದ ಡಿಜಿಟಲ್ ಇಂಡಿಯಾ ರೂಪಾಂತರದಿಂದ ಇ-ಕಾಮರ್ಸ್ ಕ್ಷೇತ್ರದ ಬೆಳವಣಿಗೆ ವೇಗವಾಗಿ ಹೆಚ್ಚಿಸಿದೆ. ಮುಂದಿನ ದಶಕದಲ್ಲಿ ಚಿಲ್ಲರೆ ಗ್ರಾಹಕ ಮಾರುಕಟ್ಟೆಯ ದೃಶ್ಯ ಕೂಡ ಬದಲಾಗಲಿದೆ. ಇದರಿಂದ ತಂತ್ರಜ್ಞಾನ ಮತ್ತು ಇ-ಕಾಮರ್ಸ್ನ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳು ಭಾರತದತ್ತ ಆಕರ್ಷಿತವಾಗುತ್ತಿವೆ. 2030ರ ವೇಳೆಗೆ 1.1 ಬಿಲಿಯನ್ ಭಾರತೀಯರು ಇಂಟರ್ನೆಟ್ ಬಳಕೆದಾರರಾಗಿರುತ್ತಾರೆ. 2020ರಲ್ಲಿ ಅಂದಾಜು 500 ಮಿಲಿಯನ್ ಇಂಟರ್ನೆಟ್ ಬಳಕೆದಾರರು ಇದ್ದರು. 4ಜಿ ಮತ್ತು 5ಜಿ ಸ್ಮಾರ್ಟ್ಫೋನ್ ಬಳಕೆ ಏರಿಕೆ ಆಗಿರುವುದು ಇ-ಕಾಮರ್ಸ್ ಬ್ರಾಂಡ್ಗಳು, ಲಾಜಿಸ್ಟಿಕ್ಸ್, ಸ್ಟಾರ್ಟಪ್ಗಳ ತ್ವರಿತ ಬೆಳವಣಿಗೆ ಕಾರಣವಾಗಿವೆ. ಅನೇಕ ಸಣ್ಣ ಕಂಪನಿಗಳು ಯುನಿಕಾರ್ನ್ಗಳಾಗಿ ಪರಿವರ್ತನೆಗೊಂಡಿವೆ.
7.3 ಟ್ರಿಲಿಯನ್ ಟಾರ್ಗೆಟ್
ಕಳೆದ ದಶಕದಲ್ಲಿ ಭಾರತಕ್ಕೆ ವಿದೇಶಿ ನೇರ ಹೂಡಿಕೆಯ ಒಳಹರಿವು ಹೆಚ್ಚಳವಾಗಿದೆ. ಇದರಿಂದ ದೀರ್ಘಾವಧಿಯ ಬೆಳವಣಿಗೆಗೆ ಅನುಕೂಲವಾಗಿದೆ. ದೇಶದ ಯುವ ಜನಸಂಖ್ಯೆ ಮತ್ತು ವೇಗವಾಗಿ ಹೆಚ್ಚುತ್ತಿರುವ ನಗರೀಕರಣ, ಹೆಚ್ಚುತ್ತಿರುವ ಆದಾಯದ ಕಾರಣ ವಾಣಿಜ್ಯ ಚಟುವಟಿಕೆ ಉತ್ತಮವಾಗಿ ನಡೆಯುತ್ತಿದೆ. ಭಾರತದ ಜಿಡಿಪಿಯು 2022ರಲ್ಲಿ 3.5 ಟ್ರಿಲಿಯನ್ ಡಾಲರ್ ಇತ್ತು. 2030ರ ವೇಳೆಗೆ ಇದು 7.3 ಟ್ರಿಲಿಯನ್ ಡಾಲರ್ಗೆ ಏರಿಕೆ ಆಗಲಿದೆ ಎಂದು ಅಂದಾಜಿಸಲಾಗಿದೆ. ಇದು ಸಾಧ್ಯವಾದರೆ 2030ರ ವೇಳೆಗೆ ಜಪಾನಿನ ಜಿಡಿಪಿಯನ್ನು ಭಾರತ ಹಿಂದಿಕ್ಕಲಿದೆ. ಏಷ್ಯಾ-ಪೆಸಿಫಿಕ್ ಪ್ರದೇಶದ ಅತಿದೊಡ್ಡ ಆರ್ಥಿಕತೆ ಆಗಲಿದೆ. ಏಷ್ಯಾದ ಎರಡನೇ ಮತ್ತು ವಿಶ್ವದ ಮೂರನೇ ಬೃಹತ್ ಆರ್ಥಿಕತೆ ಆಗಲಿದೆ. 2022ರಲ್ಲಿ ಭಾರತದ ಜಿಡಿಪಿ ಗಾತ್ರ ಬ್ರಿಟನ್ ಮತ್ತು ಫ್ರಾನ್ಸ್ ದೇಶವನ್ನು ಹಿಂದಿಕ್ಕಿದೆ. 2030ರ ವೇಳೆಗೆ ಜರ್ಮನಿಯನ್ನೂ ಮೀರಿಸಲಿದೆ.
ಬೆಳೆಯುತ್ತಿರುವ ಮಧ್ಯಮ ವರ್ಗ
ಭಾರತದ ಆರ್ಥಿಕತೆಯ ದೀರ್ಘಾವಧಿ ಮುನ್ನೋಟ ಹಲವು ಅಂಶಗಳಿಂದ ಉತ್ತಮವಾಗಿದೆ. ದೇಶದ ಪ್ರಮುಖ ಧನಾತ್ಮಕ ಅಂಶವೆಂದರೆ ವೇಗವಾಗಿ ಬೆಳೆಯುತ್ತಿರುವ ಮಧ್ಯಮ ವರ್ಗ. ಇದರಿಂದ ಗ್ರಾಹಕರ ವೆಚ್ಚದ ಪ್ರಮಾಣ ಏರಿಕೆ ಕಾಣುತ್ತಿದೆ. ವೇಗವಾಗಿ ಬೆಳೆಯುತ್ತಿರುವ ದೇಶೀಯ ಗ್ರಾಹಕ ಮಾರುಕಟ್ಟೆ ಮತ್ತು ದೊಡ್ಡ ಕೈಗಾರಿಕಾ ವಲಯವು ಭಾರತವನ್ನು ಪ್ರಮುಖ ಹೂಡಿಕೆಯ ತಾಣವನ್ನಾಗಿ ಮಾಡಿದೆ. ಉತ್ಪಾದನೆ, ಮೂಲಸೌಕರ್ಯ ಮತ್ತು ಸೇವೆಗಳು ಸೇರಿ ಹಲವು ವಲಯಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಹೂಡಿಕೆ ಭಾರಿ ಏರಿಕೆ ಕಂಡಿದೆ.
* ತ್ವರಿತ ಬೆಳವಣಿಗೆಗೆ 4ಜಿ, 5ಜಿ ಸ್ಮಾರ್ಟ್ ಫೋನ್ ಬಳಕೆ ಏರಿಕೆ, ಇ-ಕಾಮರ್ಸ್ ಬ್ರಾಂಡ್ಗಳು, ಲಾಜಿಸ್ಟಿಕ್ಸ್, ಸ್ಟಾರ್ಟಪ್ಗಳು ಕಾರಣ
* 2024ರ ಆರ್ಥಿಕ ವರ್ಷದಲ್ಲಿ ವಿಶ್ವದಾದ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಅಗ್ರಸ್ಥಾನದಲ್ಲಿ ಭಾರತ
ಯಾವ ಕ್ಷೇತ್ರಗಳಲ್ಲಿ ಪ್ರಗತಿ?
ಮುಂದಿನ ದಶಕದಲ್ಲಿ ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿ ಮುಂದುವರಿಯಲಿದೆ. ಆಟೋಮೊಬೈಲ್, ಎಲೆಕ್ಟ್ರಾನಿಕ್ಸ್, ರಾಸಾಯನಿಕಗಳಂತಹ ಉತ್ಪಾದನಾ ಉದ್ಯಮಗಳು, ಬ್ಯಾಂಕಿಂಗ್, ವಿಮೆ, ಆಸ್ತಿ ನಿರ್ವಹಣೆ, ಆರೋಗ್ಯ ರಕ್ಷಣೆ, ಹಲವು ರೀತಿಯ ಸೇವಾ ಉದ್ಯಮಗಳು ಸಹಿತ ಅನೇಕ ಕೈಗಾರಿಕೆಗಳು ತ್ವರಿತ ಬೆಳವಣಿಗೆ ಕಾಣಲಿವೆ. ಇದರಿಂದ ಭಾರತ ದೀರ್ಘಕಾಲೀನ ಬೆಳವಣಿಗೆ ಕಾಣಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕೈಗಾರಿಕಾ ಉತ್ಪಾದನೆ ಏರಿಕೆ
2024ರ ಆರ್ಥಿಕ ವರ್ಷದಲ್ಲಿ ವಿಶ್ವದಾದ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಬಿಡುಗಡೆ ಮಾಡಿದ ಮಾಸಿಕ ಆರ್ಥಿಕ ವರದಿಯಲ್ಲಿ ಹೇಳಲಾಗಿದೆ. ಹೂಡಿಕೆಯ ಏರಿಕೆ, ದೃಢವಾದ ಕೈಗಾರಿಕಾ ಚಟುವಟಿಕೆ ಕಂಡುಬಂದಿದೆ. ಕೈಗಾರಿಕಾ ಉತ್ಪಾದನೆಯ ಸೂಚ್ಯಂಕವು ಆಗಸ್ಟ್ನಲ್ಲಿ ಏರಿಕೆ ಕಂಡಿದೆ. ಇದು ಕಳೆದ 14 ತಿಂಗಳುಗಳಲ್ಲಿ ಅತ್ಯಧಿಕವಾಗಿದೆ.