ನವದೆಹಲಿ: ವಿದೇಶಿ ಪೋರ್ಟ್‌ಪೋಲಿಯೊ ಹೂಡಿಕೆದಾರರು (ಎಫ್‌ಪಿಐ) ಈ ತಿಂಗಳಲ್ಲಿ ಈವರೆಗೆ ಭಾರತದ ಷೇರುಪೇಟೆಯಿಂದ ₹20,300 ಕೋಟಿ ಹೂಡಿಕೆಯನ್ನು ಹಿಂದಕ್ಕೆ ಪಡೆದಿದ್ದಾರೆ. ಅಮೆರಿಕದ ಬಾಂಡ್ ಮೇಲಿನ ಹೂಡಿಕೆಯಿಂದ ಲಾಭ ಹೆಚ್ಚಳ, ಇಸ್ರೇಲ್-ಹಮಾಸ್ ಸಂಘರ್ಷದಿಂದಾಗಿ ಸೃಷ್ಟಿಯಾಗಿರುವ ಅನಿಶ್ಚಿತ ಸ್ಥಿತಿ ಇದಕ್ಕೆ ಮುಖ್ಯ ಕಾರಣ.
ಆಸಕ್ತಿಕರ ವಿಚಾರವೆಂದರೆ, ಎಫ್‌ಪಿಐಗಳು ಭಾರತದ ಬಾಂಡ್ ಮಾರುಕಟ್ಟೆಯಲ್ಲಿ ಈ ತಿಂಗಳಲ್ಲಿ 6,080 ಕೋಟಿ ಹೂಡಿಕೆ ಮಾಡಿವೆ.
ಎಫ್‌ಪಿಐ ಒಳಹರಿವು ಹಲವು ಅಂಶಗಳ ಮೇಲೆ ಅವಲಂಬಿತವಾಗಿದೆ. ಅಮೆರಿಕದ ಫೆಡರಲ್ ರಿಸರ್ವ್‌ನ ನ. 2ರ ಸಭೆ, ಜಾಗತಿಕ ಆರ್ಥಿಕ ಬೆಳವಣಿಗೆಗಳೂ ಇದರಲ್ಲಿ ಸೇರಿವೆ ಎಂದು ಕ್ರೇವಿಂಗ್ ಆಲ್ಫಾ ಸಂಸ್ಥೆಯ ಪಾಲುದಾರ ಮಯಾಂಕ್ ಮೆಹ್ರಾ ಹೇಳಿದ್ದಾರೆ.
ಅಲ್ಪಾವಧಿಯಲ್ಲಿ ಎಫ್‌ಪಿಐಗಳು ಹೆಚ್ಚು ಎಚ್ಚರದಿಂದ ಇರಬಹುದು ಎಂದು ಅಂದಾಜಿಸಲಾಗಿದೆ. ಜಾಗತಿಕ ಅನಿಶ್ಚಿತ ಸ್ಥಿತಿ ಮತ್ತು ಅಮೆರಿಕದಲ್ಲಿ ಬಡ್ಡಿ ದರ ಏರಿಕೆ ಇದಕ್ಕೆ ಕಾರಣ. ಹಾಗಿದ್ದರೂ ಭಾರತದಲ್ಲಿ ಹೆಚ್ಚಿನ ಆರ್ಥಿಕ ಪ್ರಗತಿಯ ಅವಕಾಶ ಇರುವುದು ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಹಾಗಾಗಿಯೇ ಷೇರುಪೇಟೆ ಮತ್ತು ಬಾಂಡ್ ಮಾರುಕಟ್ಟೆಯಲ್ಲಿ ಹೆಚ್ಚಿನ ಹೂಡಿಕೆಯ ನಿರೀಕ್ಷೆ ಇದೆ.
ಅ. 27ರವರೆಗೆ ₹20,356 ಕೋಟಿ ಹೂಡಿಕೆಯನ್ನು ವಾಪಸ್ ಪಡೆಯಲಾಗಿದೆ. ಇನ್ನೂ ಎರಡು ದಿನಗಳ ವಹಿವಾಟು ಈ ತಿಂಗಳಲ್ಲಿ ಇದೆ. ಹಾಗಾಗಿ ಈ ಮೊತ್ತ ಇನ್ನೂ ಹೆಚ್ಚಳ ಆಗಬಹುದು. ಸೆಪ್ಟೆಂಬರ್‌ನಲ್ಲಿಯೂ ಎಫ್‌ಪಿಐಗಳು ಹೂಡಿಕೆಯನ್ನು ದೊಡ್ಡ ಪ್ರಮಾಣದಲ್ಲಿಯೇ ಹಿಂದಕ್ಕೆ ಪಡೆದಿದ್ದರು. ಈ ತಿಂಗಳ ಹೂಡಿಕೆ ವಾಪಸ್ ಮೊತ್ತವು ₹14,767 ಕೋಟಿ ಆಗಿತ್ತು.
ಮಾರ್ಚ್‌ನಿಂದ ಆಗಸ್ಟ್‌ವರೆಗಿನ ಆರು ತಿಂಗಳಲ್ಲಿ ಎಫ್‌ಪಿಐಗಳಿಂದ ಹೆಚ್ಚಿನ ಹೂಡಿಕೆ ಆಗಿತ್ತು. ಈ ಮೊತ್ತವು ₹1.74 ಲಕ್ಷ ಕೋಟಿ ಆಗಿತ್ತು.
ಈಗ, ಹಣಕಾಸು ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಿಂದ ಹೆಚ್ಚಿನ ಹೂಡಿಕೆ ಹೊರ ಹೋಗುತ್ತಿದೆ.