ಪಟ್ನಾ: ಸರ್ಕಾರಿ ಶಾಲೆಗಳಲ್ಲಿ ಗೈರು ಹಾಜರಾದ 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಹೆಸರನ್ನು ಕೈಬಿಡುವ ಬಿಹಾರದ ಶಿಕ್ಷಣ ಇಲಾಖೆಯ ಕ್ರಮವು ಭಾರಿ ಟೀಕೆಗೆ ಗುರಿಯಾಗಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದ ಭಾಗವಾಗಿರುವ ಮಿತ್ರಪಕ್ಷಗಳು ಮತ್ತು ವಿರೋಧ ಪಕ್ಷಗಳು ಇಲಾಖೆಯ ಈ ಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.
10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗೆ ಹಾಜರಾಗಬೇಕಿದ್ದ 2.66 ಲಕ್ಷ ವಿದ್ಯಾರ್ಥಿಗಳ ಹೆಸರು ಸಹ ಇದರಲ್ಲಿ ಸೇರಿದೆ.
ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಕೆ.ಪಾಠಕ್ ಸೂಚನೆಯಂತೆ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಸುಧಾರಣೆಗೆ ಸಂಬಂಧಿಸಿದಂತೆ ಸೆ.1ರಿಂದ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಅಕ್ಟೋಬರ್ 19ರವರೆಗೆ 20,60,340 ವಿದ್ಯಾರ್ಥಿಗಳ ಹೆಸರನ್ನು ಕೈಬಿಡಲಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
'ಖಾಸಗಿ ಶಾಲೆಗಳು ಹಾಗೂ ಕೋಟಾದ ಕೋಚಿಂಗ್ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸರ್ಕಾರದ ಸಮವಸ್ತ್ರ, ಪಠ್ಯಪುಸ್ತಕದ ಲಾಭ ಪಡೆಯಲು ಸರ್ಕಾರಿ ಶಾಲೆಗಳಲ್ಲೂ ನೋಂದಾಯಿಸಿಕೊಂಡಿದ್ದಾರೆ. ಸರ್ಕಾರಿ ಶಾಲೆಗೆ ಸತತ 15 ದಿನ ಗೈರು ಹಾಜರಾಗುವ ವಿದ್ಯಾರ್ಥಿಗಳನ್ನು ಪತ್ತೆ ಮಾಡಿ, ಕಠಿಣ ಕ್ರಮ ಕೈಗೊಳ್ಳಿ' ಎಂದು ಪಾಠಕ್ ಸೆ.2ರಂದು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.
ಮೈತ್ರಿ ಸರ್ಕಾರದ ಭಾಗವಾಗಿರುವ ಸಿಪಿಐ (ಎಂಎಲ್) ವಿಮೋಚನಾ ಶಾಸಕ ಸಂದೀಪ್ ಸೌರವ್ 'ಇಲಾಖೆಯ ಈ ಕ್ರಮ ಸರ್ವಾಧಿಕಾರದ ನಿಲುವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮತ್ತು ಕೊಠಡಿಗಳ ಕೊರತೆ ಇದೆ. ಸೌಲಭ್ಯಗಳು ಕಲ್ಪಿಸದೆಯೇ ಶೇ 100ರಷ್ಟು ಹಾಜರಾತಿಯನ್ನು ನಿರೀಕ್ಷಿಸುವುದು ಹೇಗೆ' ಎಂದು ಪ್ರಶ್ನಿಸಿದ್ದಾರೆ.
ಬಿಹಾರ ವಿರೋಧ ಪಕ್ಷದ ನಾಯಕ ವಿಜಯ್‌ಕುಮಾರ್ ಸಿನ್ಹಾ ಸಹ ವಾಗ್ದಾಳಿ ನಡೆಸಿದ್ದಾರೆ.