ನವದೆಹಲಿ: ಮುಂದಿನ ವಾರ ಇಲ್ಲಿ ನಡೆಯಲಿರುವ ಜಿ20 ರಾಷ್ಟ್ರಗಳ ಸಂಸತ್ ಸ್ಪೀಕರ್‌ಗಳ ಶೃಂಗಸಭೆಯಲ್ಲಿ ಕೆನಡಾ ಜತೆಗಿನ ಎಲ್ಲ ವಿಷಯಗಳ ಬಗ್ಗೆ ಭಾರತ ಪ್ರಸ್ತಾಪಿಸಲಿದೆ ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ದ್ವಾರಕಾದಲ್ಲಿನ 'ಯಶೋಭೂಮಿ'ಯಲ್ಲಿ ಇದೇ 12ರಿಂದ 14ರವರೆಗೆ ನಡೆಯಲಿರುವ ಈ ಶೃಂಗಸಭೆಯಲ್ಲಿ 25 ರಾಷ್ಟ್ರಗಳ ಸ್ಪೀಕರ್‌ಗಳು ಮತ್ತು ಜಿ20 ದೇಶಗಳು ಮತ್ತು ಆಹ್ವಾನಿತ ದೇಶಗಳಿಂದ 10 ಮಂದಿ ಉಪ ಸ್ಪೀಕರ್‌ಗಳು ಸೇರಿ 350ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಭಾರತ ವಿರುದ್ಧ ಆರೋಪ ಮಾಡಲು ಕೆನಡಾದ ಸಂಸತ್ತನ್ನು ಬಳಸಿಕೊಂಡ ವಿಷಯವನ್ನು ಕೆನಡಾ ಸ್ಪೀಕರ್ ಜತೆಗೆ ಪ್ರಸ್ತಾಪಿಸಲಾಗುತ್ತದೆಯೇ ಎಂದು ಕೇಳಿದಾಗ, ಬಿರ್ಲಾ ಅವರು 'ನಾವು ಶೃಂಗಸಭೆಗೆ ಪಟ್ಟಿ ಮಾಡಲಾದ ವಿಷಯಗಳನ್ನು ಚರ್ಚಿಸುತ್ತೇವೆ. ಇತರ ವಿಷಯಗಳನ್ನು ಅನೌಪಚಾರಿಕವಾಗಿ ಚರ್ಚಿಸಲಾಗುವುದು' ಎಂದು ಸ್ಪಷ್ಟಪಡಿಸಿದರು.
ಶೃಂಗಸಭೆಯಲ್ಲಿ ಕೆನಡಾ ಸೆನೆಟ್‌ನ ಸ್ಪೀಕರ್ ರೇಮಂಡೆ ಗಗ್ನೆ ಭಾಗವಹಿಸುತ್ತಿದ್ದಾರೆ. ಕಳೆದ ಜೂನ್‌ನಲ್ಲಿ ನಡೆದ ಖಾಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಏಜೆಂಟರ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ ನಂತರ ಉಭಯ ರಾಷ್ಟ್ರಗಳ ಬಾಂಧವ್ಯದಲ್ಲಿ ತೀವ್ರ ಬಿರುಕು ಕಾಣಿಸಿದೆ.