ಬೆಂಗಳೂರು: ಮಾನವ ಸಹಿತ 'ಗಗನಯಾನ'ಕ್ಕೆ ಪೂರ್ವಭಾವಿಯಾಗಿ ನಡೆಯುವ ಸರಣಿ ಪರೀಕ್ಷಾ ಉಡಾವಣೆಗಳ ಪೈಕಿ ಮೊದಲ ಮಾನವರಹಿತ ಪರೀಕ್ಷಾ ವಾಹನದ ಉಡಾವಣೆ ಇದೇ 21 ರಂದು ಶ್ರೀಹರಿಕೋಟದಿಂದ ನಡೆಯಲಿದೆ.
ಬೆಂಗಳೂರು: ಮಾನವ ಸಹಿತ 'ಗಗನಯಾನ'ಕ್ಕೆ ಪೂರ್ವಭಾವಿಯಾಗಿ ನಡೆಯುವ ಸರಣಿ ಪರೀಕ್ಷಾ ಉಡಾವಣೆಗಳ ಪೈಕಿ ಮೊದಲ ಮಾನವರಹಿತ ಪರೀಕ್ಷಾ ವಾಹನದ ಉಡಾವಣೆ ಇದೇ 21 ರಂದು ಶ್ರೀಹರಿಕೋಟದಿಂದ ನಡೆಯಲಿದೆ.
ಅಂದು ಬೆಳಿಗ್ಗೆ 7ರಿಂದ 9ರ ಮಧ್ಯೆ ಈ ಉಡಾವಣೆ ನಡೆಯಲಿದೆ. ಈ ಪರೀಕ್ಷೆಯಲ್ಲಿ ಗಗನಯಾನಿಗಳು ಪಾರಾಗುವ ವ್ಯವಸ್ಥೆಯ(ಕ್ರೂ ಎಸ್ಕೇಪ್ ಸಿಸ್ಟಂ) ಪ್ರಾತ್ಯಕ್ಷಿಕೆಯೂ ಇರಲಿದೆ.
ಈ ಕುರಿತು ಮಾತನಾಡಿರುವ ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್, ಒಟ್ಟು ಮೂರು ಸರಣಿ ಪರೀಕ್ಷಾ ಉಡಾವಣೆಗಳು ನಡೆಯಲಿವೆ. ಇವುಗಳನ್ನು ಗಗನಯಾನ ಕಾರ್ಯಕ್ರಮದಡಿ ನಡೆಸಲಾಗುವುದು. ಗಗನಯಾನದ ಮೂಲಕ ಗಗನಯಾನಿಗಳನ್ನು ಭೂಮಿಯ 400 ಕಿ.ಮೀ ಕಕ್ಷೆಗೆ ಕಳುಹಿಸಿ ವಾಪಸ್ ಭೂಮಿಗೆ ಸುರಕ್ಷಿತವಾಗಿ ಕರೆತರಲಾಗುವುದು. ಈ ಮೂಲಕ ಮಾನವಸಹಿತ ಬಾಹ್ಯಾಕಾಶ ಯಾನದ ಸಾಮರ್ಥ್ಯವನ್ನು ಪ್ರದರ್ಶಿಸಲಾಗುವುದು ಎಂದು ಹೇಳಿದ್ದಾರೆ.
ಮುಂದಿನ ವರ್ಷದ ಕೊನೆಯ ವೇಳೆಗೆ ಭಾರತೀಯ ಗಗನಯಾನಿಗಳನ್ನು ಬಾಹ್ಯಾಕಾಶ ನೌಕೆಯು ಹೊತ್ತೊಯ್ಯಲಿದೆ. ಇದಕ್ಕಾಗಿ ಗಗನಯಾನಿಗಳು ಕುಳಿತು ಪಯಣಿಸುವ ಕೋಶ ಅಥವಾ 'ಕ್ರೂ ಮಾಡ್ಯೂಲ್'ನ ಪರೀಕ್ಷೆಯನ್ನು ಟಿವಿ-ಡಿ1 (ಟೆಸ್ಟ್ ವೆಹಿಕಲ್ ಡೆವಲಪ್‌ಮೆಂಟ್ ಫ್ಲೈಟ್)ಮೂಲಕ ನಡೆಸಲಾಗುವುದು ಎಂದು ಅವರು ವಿವರಿಸಿದರು.
ಪರೀಕ್ಷಾ ಉಡಾವಣೆಯಲ್ಲಿ ಕ್ರೂ ಮಾಡ್ಯೂಲ್ ಅನ್ನು ಬಾಹ್ಯಾಕಾಶಕ್ಕೆ ಒಯ್ದು ಅದನ್ನು ವಾಪಸ್ ಭೂಮಿಗೆ ತರಲಾಗುವುದು. ಇದು ಬಂಗಾಳಕೊಲ್ಲಿಗೆ ಬಂದು ಇಳಿಯಲಿದೆ. ಅಲ್ಲಿಂದ ಕ್ರೂ ಮಾಡ್ಯೂಲ್ ಅನ್ನು ವಶಕ್ಕೆ ಪಡೆಯಲಾಗುತ್ತದೆ.