ನವದೆಹಲಿ: ಇಸ್ರೇಲ್‌ನಿಂದ ಹೊರಟ 235 ಭಾರತೀಯರನ್ನು ಹೊತ್ತ ಎರಡನೇ ವಿಮಾನ ಇಂದು ಬೆಳಿಗ್ಗೆ ನವದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಸ್ವದೇಶಕ್ಕೆ ಮರಳಿದ ಭಾರತೀಯರನ್ನು ವಿಮಾನ ನಿಲ್ದಾಣದಲ್ಲಿ ವಿದೇಶಾಂಗ ಖಾತೆಯ ರಾಜ್ಯ ಸಚಿವ ರಾಜ್‌ಕುಮಾರ್ ರಂಜನ್ ಸಿಂಗ್ ಸ್ವಾಗತಿಸಿದರು.
ಈ ವೇಳೆ ಸ್ವದೇಶಕ್ಕೆ ಮರಳಿದ ಪ್ರಯಾಣಿಕರು, ಆಪರೇಷನ್ ಅಜಯ್ ಕಾರ್ಯಾಚರಣೆ ಹಮ್ಮಿಕೊಂಡಿರುವ ಭಾರತ ಸರ್ಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಈ ಮೊದಲು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್, 235 ಭಾರತೀಯರು ಹೊತ್ತ ಎರಡನೇ ವಿಮಾನ ಇಸ್ರೇಲ್‌ನ ಟೆಲ್ ಅವೀವ್‌ನಿಂದ ಟೇಕ್ ಆಫ್ ಆಗಿದೆ ಎಂದು ತಿಳಿಸಿದ್ದರು.
ಆಪರೇಷನ್ ಅಜಯ್...
ಇಸ್ರೇಲ್‌ನಿಂದ ಸ್ವದೇಶಕ್ಕೆ ಮರಳಲು ಬಯಸುವವರನ್ನು ಕರೆತರಲು ಭಾರತವು 'ಆಪರೇಷನ್ ಅಜಯ್' ಕಾರ್ಯಾಚರಣೆ ಆರಂಭಿಸಿದೆ. ಮೊದಲ ತಂಡದಲ್ಲಿ ಐವರು ಕನ್ನಡಿಗರು ಸೇರಿದಂತೆ 212 ಭಾರತೀಯರು ತಾಯ್ನಾಡಿಗೆ ಆಗಮಿಸಿದ್ದರು. ಇಸ್ರೇಲ್‌ನಿಂದ ವಿಶೇಷ ವಿಮಾನದಲ್ಲಿ ಬಂದ ಭಾರತೀಯರ ಮೊದಲ ತಂಡವನ್ನು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸ್ವಾಗತಿಸಿದ್ದರು.