ಜೆರುಸಲೇಂ: ಗಾಜಾ ಪಟ್ಟಿಯ ಮೇಲೆ ಸಂಪೂರ್ಣ ಮುತ್ತಿಗೆ ಹಾಕುವಂತೆ ಸೋಮವಾರ ಸೇನೆಗೆ ಆದೇಶಿಸಿದ ಇಸ್ರೇಲ್, ಗಾಜಾದ 2.3 ಮಿಲಿಯನ್ ಜನರಿಗೆ ವಿದ್ಯುತ್, ನೀರು, ಆಹಾರ ಪೂರೈಕೆಯನ್ನು ಸ್ಥಗಿತಗೊಳಿಸಿದೆ.
ನಾವು ಗಾಜಾವನ್ನು ಸಂಪೂರ್ಣ ಸೀಜ್ ಮಾಡಿದ್ದೇವೆ. ಅಲ್ಲಿ ವಿದ್ಯುತ್, ಆಹಾರ, ನೀರು ಪೂರೈಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಗೃಹ ಅಥವಾ ವಾಣಿಜ್ಯ ಬಳಕೆ ಅನಿಲ ಪೂರೈಕೆ ಸಹ ಇರುವುದಿಲ್ಲ. ಎಲ್ಲವನ್ನೂ ಸ್ಥಗಿತಗೊಳಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಹಮಾಸ್ ಉಗ್ರರು ನಡೆಸಿದ ಭಯಾನಕ ದಾಳಿಯಿಂದ ತತ್ತರಿಸಿರುವ ಇಸ್ರೇಲ್ ನಲ್ಲಿ 700ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಇಸ್ರೇಲ್ ನಡೆಸಿದ ಪ್ರತಿದಾಳಿಯಲ್ಲಿ ಗಾಜಾ ಪಟ್ಟಿಯಲ್ಲಿ 560ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.
ಇಸ್ರೇಲ್ ಭೂ ಸೇನೆಗೆ ಕೈ ಜೋಡಿಸಲು 3 ಲಕ್ಷಕ್ಕೂ ಹೆಚ್ಚು ಮೀಸಲು ಪಡೆ ಯೋಧರಿಗೆ ಬುಲಾವ್ ನೀಡಲಾಗಿದೆ. ಗಾಜಾ ಪಟ್ಟಿಯಲ್ಲಿ ವಾಯು ಪಡೆ ಆರ್ಭಟಿಸುತ್ತಿದ್ದ ಬೆನ್ನಲ್ಲೇ ಭೂ ಸೇನೆ ಕೂಡಾ ಗಾಜಾ ಪಟ್ಟಿಗೆ ನುಗ್ಗಲಿದ್ದು, ಹಮಾಸ್ ಉಗ್ರರ ಹುಟ್ಟಡಗಿಸಲು ತೀರ್ಮಾನಿಸಿದೆ. ಈಗಾಗಲೇ ಇಸ್ರೇಲ್ ವಾಯು ಪಡೆ ನಡೆಸಿದ ನಿರಂತರ ಬಾಂಬ್ ದಾಳಿಯಿಂದ ಗಾಜಾ ಪಟ್ಟಿಯಲ್ಲಿ ಮೃತರ ಸಂಖ್ಯೆ ತೀವ್ರವಾಗಿ ಏರುತ್ತಿದೆ.