ನವದೆಹಲಿ: ವಾಯು ಮಾಲಿನ್ಯ ನಿಯಂತ್ರಣ ಹಾಗೂ ಈ ಬಗ್ಗೆ ಬರುವ ದೂರುಗಳ ನಿವಾರಣೆಗೆ ದೆಹಲಿ ಸರ್ಕಾರ ಸ್ಥಾಪಿಸಿರುವ 'ಗ್ರೀನ್ ವಾರ್ ರೂಂ' ಇನ್ನು ಮುಂದೆ ದಿನದ 24 ಗಂಟೆಯೂ ಕೆಲಸ ಮಾಡಲಿದೆ. ವಿಶ್ಲೇಷಕರು ಹಾಗೂ ತಜ್ಞರ ದೊಡ್ಡ ತಂಡ ಮಂಗಳವಾರದಿಂದ ಕೆಲಸ ಮಾಡಲು ಪ್ರಾರಂಭಿಸಿದೆ ಎಂದು ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ತಿಳಿಸಿದ್ದಾರೆ.
2020ರಲ್ಲಿ ಈ ಯೋಜನೆ ಜಾರಿಗೊಳಿಸಲಾಗಿತ್ತು. ಅಲ್ಲಿ ವಾಯು ಮಾಲಿನ್ಯ ನಿಗಾ ಸಾಧನ ಹಾಗೂ ವಿಜ್ಞಾನಿಗಳು, ದತ್ತಾಂಶ ವಿಶ್ಲೇಷಕರು ಇರುವ ತಜ್ಞರ ತಂಡ ದೆಹಲಿಯ ವಾಯು ಮಾಲಿನ್ಯದ ಮೂಲವನ್ನು ಪತ್ತೆ ಹಚ್ಚಿ, ಆ ಬಗ್ಗೆ ಕ್ರಿಯಾ ಯೋಜನೆಯನ್ನು ಜಾರಿಗೊಳಿಸಲು ನೆರವಾಗುತ್ತಿತ್ತು.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ರೈ, ವಾಯು ಮಾಲಿನ್ಯಕ್ಕೆ ಸಂಬಂಧಿಸಿದ ದೂರುಗಳನ್ನು ಗ್ರೀನ್ ವಾರ್ ರೂಂಗೆ ಸಾರ್ವಜನಿಕರು 'ಗ್ರೀನ್ ಡೆಲ್ಲಿ' ಮೊಬೈಲ್ ಅಪ್ಲಿಕೇಶನ್ ಮೂಲಕ ಸಲ್ಲಿಸಬಹುದು ಎಂದು ಹೇಳಿದರು.
ಸಾರ್ವಜನಿಕರಿಂದ ಬಂದ ದೂರುಗಳನ್ನು ವಾರ್ ರೂಂನಿಂದ ಸಂಬಂಧಪಟ್ಟ ಇಲಾಖೆಗೆ ರವಾನಿಸಲಾಗುತ್ತದೆ.
ಈ ಗ್ರೀನ್ ರೂಂನಲ್ಲಿ 17 ಮಂದಿ ತಜ್ಞರು ಇರಲಿದ್ದು, ಪರಿಸರ ವಿಜ್ಞಾನಿ ನಂದಿತಾ ಮೊಯಿತ್ರಾ ಅವರ ನೇತೃತ್ವದಲ್ಲಿ ಇವರು ಕೆಲಸ ನಿರ್ವಹಿಸಲಿದ್ದಾರೆ.