ಜೆರುಸಲೇಂ: ಗಾಜಾ ನಗರವನ್ನು 24 ಗಂಟೆಯೊಳಗೆ ತೆರವುಗೊಳಿಸುವಂತೆ ಇಸ್ರೇಲ್ ಸೇನೆ ಸುಮಾರು 10 ಲಕ್ಷ ಪ್ಯಾಲೆಸ್ಟೀನಿಯನ್ನರಿಗೆ ಸೂಚಿಸಿದೆ.
ಹಮಾಸ್ ಬಂಡುಕೋರರ ವಿರುದ್ಧ ಭೂಸೇನೆ ಮೂಲಕ ದಾಳಿ ನಡೆಸಲು ಸಿದ್ಧತೆ ನಡೆಸಿರುವುದರ ನಡುವೆಯೇ ವಿಶ್ವಸಂಸ್ಥೆಗೆ ಇಸ್ರೇಲ್ ಈ ಮಾಹಿತಿ ರವಾನಿಸಿದೆ.
ಅನೇಕ ಜನರು ಏಕಕಾಲದಲ್ಲಿ ಹೊರ ನುಗ್ಗುವುದು ವಿಪತ್ತಿಗೆ ಕಾರಣವಾಗಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಸಿದ್ದರೆ, ಗೊಂದಲ ಮೂಡಿಸಲು ಇಸ್ರೇಲ್ ಯತ್ನಿಸುತ್ತಿದೆ, ಜನರು ತಮ್ಮ ಮನೆಗಳಲ್ಲೇ ಉಳಿಯಬೇಕು ಎಂದು ಹಮಾಸ್ ಹೇಳಿದೆ.
ಹಮಾಸ್‌ನ ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಬೇಕಿರುವ ಕಾರಣ ಗಾಜಾ ನಗರದ ಜನರೆಲ್ಲರೂ 40 ಕಿ.ಮೀ ದೂರವಿರುವ ದಕ್ಷಿಣ ಭಾಗದತ್ತ ತೆರಳಬೇಕು ಎಂದು ಇಸ್ರೇಲಿ ಮಿಲಿಟರಿ ಶುಕ್ರವಾರ ಬೆಳಿಗ್ಗೆ ಹೇಳಿದೆ. ದಾಳಿಯಲ್ಲಿ ಜನರಿಗೆ ಆಗುವ ಹಾನಿ ತಡೆಯಲು ಈ ಕ್ರಮ ಅನಿವಾರ್ಯ. ಯುದ್ಧ ಮುಗಿದ ಬಳಿಕ ಜನರು ಮರಳಲು ಅವಕಾಶ ನೀಡಲಾಗುವುದು ಎಂದು ವಕ್ತಾರ ಜೋನಾಥನ್ ಕೊರ್ನಿಕಸ್ ತಿಳಿಸಿದರು.
'ಗಾಜಾ ಜನ ಸ್ಥಳಾಂತರವಾಗುವುದನ್ನು ಹಮಾಸ್ ತಡೆದರೆ, ಹೊಣೆಗಾರಿಕೆಯನ್ನು ಅವರೇ ಹೊರಬೇಕು. ಹಮಾಸ್‌ನ ಎಲ್ಲ ಮುಖ್ಯ ನೆಲೆಗಳ ಮೇಲೆ ದಾಳಿ ನಡೆಸಲಾಗುವುದು' ಎಂದು ಮತ್ತೊಬ್ಬ ವಕ್ತಾರ ಡೇನಿಯಲ್ ಹಂಗರಿ ಎಚ್ಚರಿಕೆ ನೀಡಿದರು.
'ಪ್ಯಾಲೆಸ್ಟೀನಿಯನ್ನರು ಗಾಜಾ ತೆರವುಗೊಳಿಸಬೇಕು ಎಂಬುದು ಅಧಿಕೃತ ಆದೇಶವೇ ಎಂಬ ಬಗ್ಗೆ ಇಸ್ರೇಲ್ ದೃಢಪಡಿಸಿಲ್ಲ. ಒಂದು ವೇಳೆ ಇದು ದೃಢಪಟ್ಟರೂ ಈ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಮನವಿ ಮಾಡಲಾಗುವುದು' ಎಂದು ವಿಶ್ವಸಂಸ್ಥೆ ಹೇಳಿದೆ.
ಇಸ್ರೇಲ್ ಗಡುವು ನೀಡುತ್ತಿದ್ದಂತೆಯೇ ಗಾಜಾದಲ್ಲಿನ ಹಲವು ಜನರು ಸಿಕ್ಕ ಸಿಕ್ಕ ವಾಹನಗಳಲ್ಲಿ ಮನೆ ಸಾಮಗ್ರಿಗಳನ್ನು ಹೇರಿಕೊಂಡು ದಕ್ಷಿಣ ಭಾಗದತ್ತ ಹೊರಟಿದ್ದಾರೆ. ಮನೆಗಳನ್ನು ತೊರೆದು ಕಾರುಗಳಲ್ಲಿ ಹಾಸಿಗೆ, ಬಟ್ಟೆಗಳೊಂದಿಗೆ ತೆರಳುತ್ತಿರುವ ದೃಶ್ಯಗಳು ವಿಡಿಯೊಗಳಲ್ಲಿ ಸೆರೆಯಾಗಿವೆ.
ಗಾಜಾದ ಉತ್ತರ ಭಾಗದ ಜನರು ಕಾರು, ದ್ವಿಚಕ್ರ ವಾಹನ, ಟ್ರಕ್‌ಗಳಲ್ಲಿ ತೆರಳುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಯುದ್ಧದಲ್ಲಿ ಈಗಾಗಲೇ ಎರಡೂ ಕಡೆ 2,800 ಜನರು ಅಸು ನೀಗಿದ್ದಾರೆ. ಗಾಜಾದ ಅತಿ ದೊಡ್ಡ ಆಸ್ಪತ್ರೆಯ ಶವಾಗಾರ ತುಂಬಿ ತುಳುಕುತ್ತಿದೆ.
4 ಲಕ್ಷ ಜನ ನಿರಾಶ್ರಿತರು (ಜಿನೀವಾ ವರದಿ): ಗಾಜಾ ಪಟ್ಟಿಯಿಂದ 4 ಲಕ್ಷಕ್ಕೂ ಹೆಚ್ಚು ಜನರು ಮನೆಗಳನ್ನು ತೊರೆದು ನಿರಾಶ್ರಿತರಾಗಿದ್ದಾರೆ ಮತ್ತು ನೆರವಿಗೆ ಧಾವಿಸಿದ್ದ 23 ಮಂದಿ ವಿವಿಧ ಸ್ವಯಂ ಸೇವಕರು ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಿತ ಪ್ರತಿಪಾದಕ ಕಚೇರಿ ಶುಕ್ರವಾರ ಹೇಳಿದೆ.
ಗಾಜಾ ಮತ್ತು ಪಶ್ಚಿಮ ದಂಡೆಯಲ್ಲಿ 13 ಲಕ್ಷ ಜನರಿಗೆ ನೆರವು ನೀಡಲು 294 ಲಕ್ಷ ಡಾಲರ್ ನಿಧಿ ಸಂಗ್ರಹ ಕಾರ್ಯ ಆರಂಭಿಸಲಾಗಿದೆ. ಇದರಲ್ಲಿ ಅರ್ಧದಷ್ಟು ಹಣವನ್ನು ಆಹಾರ ಪೂರೈಕೆಗೆ ಬಳಸಲಾಗುವುದು ಎಂದು ಹೇಳಿದೆ.
ಖಾಸಗಿ ವಿಮಾನಗಳಿಗೆ ಹೆಚ್ಚಿದ ಬೇಡಿಕೆ
ಇಸ್ರೇಲ್‌ನಿಂದ ಜನರು ಇತರ ದೇಶಗಳಿಗೆ ಹೋಗಲು ಬಯಸಿರುವುದರಿಂದ ಖಾಸಗಿ ಜೆಟ್ ವಿಮಾನಗಳು ಮತ್ತು ಲಘು ವಿಮಾನಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಸ್ವಿಟ್ಜರ್ಲೆಂಡ್ ಮೂಲದ ಲುನಾಜೆಟ್‌ನ ಸಿಇಒ ಎಮೆರಿಕ್ ಸೆಗಾರ್ಡ್ ಹೇಳಿದ್ದಾರೆ.
ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ದಾಳಿ ನಡೆಸಿದ ಬಳಿಕ ಗಾಜಾ ಪಟ್ಟಿ ಮೇಲೆ ಇಸ್ರೇಲ್ ಪ್ರತಿ ದಾಳಿ ನಡೆಸಿದೆ. ಅಲ್ಲದೆ ಗಡಿಯಲ್ಲಿ ಟ್ಯಾಂಕರ್‌ಗಳು ಸುತ್ತುವರಿದಿವೆ. ಅಮೆರಿಕ, ಫ್ರಾನ್ಸ್, ಜರ್ಮನಿ ತಮ್ಮ ದೇಶದ ಪ್ರಜೆಗಳನ್ನು ಲಘು ವಿಮಾನಗಳ ಮೂಲಕ ತೆರವುಗೊಳಿಸುತ್ತಿವೆ.
'ಎಲ್ಲರೂ ನಾವು ಇಲ್ಲಿಂದ ಹೋಗಲೇಬೇಕು ಎನ್ನುತ್ತಾರೆ. ಎಲ್ಲಿಗೆ ಹೋಗಬೇಕೆಂದು ಅವರು ನಿರ್ದಿಷ್ಟವಾಗಿ ಹೇಳುವುದಿಲ್ಲ. ಇಲ್ಲಿಂದ ಹೊರಗೆ ಕರೆದೊಯ್ಯಿರಿ ಎಂದಷ್ಟೇ ಅಂಗಲಾಚುತ್ತಾರೆ' ಎಂದು ಸಿಇಒ ಹೇಳುತ್ತಾರೆ.